Latest Posts

ಕೃಷಿಗೆ ಇಸ್ಲಾಂ ನೀಡಿದ ಮಹತ್ವ ವರ್ತಮಾನವನ್ನು ಎಚ್ಚರಿಸುತ್ತಿದೆ -ಟಿ.ಎಂ ಅನ್ಸಾರ್ ಸ‌ಅದಿ ತಂಬಿನಮಕ್ಕಿ

ಕೃಷಿ ಮತ್ತು ಇಸ್ಲಾಂ ಭಾಗ-01

~ಟಿ.ಎಂ ಅನ್ಸಾರ್ ಸ‌ಅದಿ ತಂಬಿನಮಕ್ಕಿ
••••••••••••••••••••••••••••••••••••
ಕೇಂದ್ರ ಸರಕಾರ ಜಾರಿಗೆ ತಂದ ಮೂರು ಕೃಷಿ ಕಾಯ್ದೆಗಳ ವಿರುದ್ದ ದೇಶದ ಸುಮಾರು ಇಪ್ಪತ್ತಾರರಷ್ಟು ರೈತ ಸಂಘಟನೆಗಳು ಬೀದಿಗಿಳಿದು ಎರಡು ತಿಂಗಳುಗಳೇ ಕಳೆದಿವೆ. ಮೈಕೊರೆಯುವ ತೀಕ್ಷ್ಣ ಚಳಿಯನ್ನೂ ಧಿಕ್ಕರಿಸಿ ಅನ್ನದಾತರು ನಡೆಸುತ್ತಿರುವ ಈ ಹೋರಾಟ ಎರಡನೇ ಸ್ವಾತಂತ್ರ್ಯ ಸಂಗ್ರಾಮದ ಸ್ವರೂಪವನ್ನು ಪಡೆದು ಕೊಂಡಿದೆ. ರೈತರ ಪಾಲಿಗೆ ಮರಣ ಶಾಸನದಂತಿರುವ ಈ ಕಾಯ್ದೆಯ ವಿರುದ್ದ ಭುಗಿಲೆದ್ದ ಹೋರಾಟವನ್ನು ಹಲವು ರೀತಿಯಲ್ಲಿ ಹತ್ತಿಕ್ಕಲು ಕೇಂದ್ರ ಸರಕಾರ ಯತ್ನಿಸಿತು. ಬ್ಯಾರಿಕೇಡ್ ಹಾಕಿತು. ಅಶ್ರುವಾಯು ಸಿಡಿಸಿತು. ಲಾಠಿಚಾರ್ಜ್ ನಡೆಸಿತು. ಕೊನೆಗೆ ಹೆದ್ದಾರಿಯಲ್ಲೇ ಹೊಂಡ ತೋಡಿ ರೈತರನ್ನು ದಿಲ್ಲಿ ಪ್ರವೇಶಿಸದಂತೆ ಮಾಡಿತು. ಆದರೆ ಕಾರ್ಪೊರೇಟ್ ಕೃಪೆಯ ಮೋದಿ ಸರಕಾರ ಅದೆಷ್ಟೇ ಸದ್ದಡಗಿಸಲು ಪ್ರಯತ್ನಿಸಿದರೂ ರೈತರು ದಿಲ್ಲಿಯ ಸರಹದ್ದನ್ನು ದಾಟಿಯೇ ಬಿಟ್ಟರು. ಪ್ರಾಣ ತೆತ್ತರೂ ಕಾಯ್ದೆ ವಾಪಸ್ ತೆಗೆಯದೇ ತೆರಳಲಾರೆವೆಂದು ಪ್ರತಿಜ್ಞೆಗೈದೇ ಮುಂದಡಿಯಿಟ್ಟರು. ಮಳೆ-ಚಳಿಗೆ ಮೈಯೊಡ್ಡಿಕೊಂಡೇ ನಿರಂತರ ಪ್ರತಿಭಟನೆಯಲ್ಲಿ ನಿರತರಾದರು. ಐವತ್ತರಷ್ಟು ಮಂದಿ ಪ್ರಾಣ ಕಳೆದುಕೊಂಡರು. ಒಬ್ಬ ಧರ್ಮಗುರುವೂ ಸೇರಿ ಇಬ್ಬರು ಈ ಕಾಯ್ದೆಯ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡರು. ರಾಷ್ಟ್ರೀಯತೆಯ ಪೋಷಾಕು ಧರಿಸಿದ ಬಿಜೆಪಿ, ಮೋದಿ ಮತ್ತು ಭಕ್ತ ಪಟಾಳಂ ಈ ರೈತ ಹೋರಾಟವನ್ನು ಆರಂಭದಿಂದಲೇ ತಿರಸ್ಕಾರದ ಧೃಷ್ಟಿಯಿಂದಲೇ ಕಾಣುತ್ತಾ ಬಂದಿದ್ದರು. ಅಸ್ತಿತ್ವದ ಉಳಿವಿಗಾಗಿ ಹೋರಾಡುವ ರೈತರನ್ನು ಖಲಿಸ್ತಾನಿ ಉಗ್ರರೆಂದೂ, ಕಾಂಗ್ರೆಸ್‌ನ ಏಜೆಂಟರೆಂದೆಲ್ಲಾ ಮೂದಲಿಸಲಾಯಿತು. ಯಾವ ನೆಲದ ಹೆಸರಲ್ಲಿ ಬಿಜೆಪಿ ಮತ್ತು ಸಂಘಪರಿವಾರ ರಾಷ್ಟ್ರೀಯತೆಯನ್ನು ಪ್ರತಿಪಾದಿಸುತ್ತದೋ ಅದೇ ನೆಲದ ಉಳಿವಿಗಾಗಿ ಈಗ ರೈತರು ಬಿಜೆಪಿ ಮತ್ತು ಸಂಘಪ್ರಣೀತ ಸರಕಾರದೊಂದಿಗೆ ಸೆಣೆಸಾಡುತ್ತಿದ್ದಾರೆ. ಒಟ್ಟಿನಲ್ಲಿ ಸಂಘಪರಿವಾರ ಮತ್ತು ಬಿಜೆಪಿ ಪ್ರತಿಪಾದಿಸುವ ರಾಷ್ಟ್ರೀಯತೆ ಕಾರ್ಪೋರೆಟ್ ನಿಷ್ಟೆಯದ್ದೆಂಬುದು ಇದರಿಂದ ನಿಚ್ಚಳವಾಗುತ್ತಿದೆ‌.

ರೈತರ ಈ ಚರಿತ್ರಾರ್ಹ ಚಳುವಳಿಯು ಒಂದು ದೇಶವ್ಯಾಪಿ ಜನಾಂದೋಲನದ ರೂಪ ಪಡೆದು ಈಗಾಗಲೇ ನಿರ್ಣಾಯಕ ಹಂತಕ್ಕೆ ತಲುಪಿದೆ. ಇದೇ ಇಪ್ಪತ್ತಾರನೇ ತಾರೀಕಿಗೆ ನಡೆಸಲು ಉದ್ದೇಶಿಸಿರುವ ಜನಗಣ್ ಪರೇಡ್ ಮತ್ತು ಅದಕ್ಕೆ ಮುಂಚಿತವಾಗಿ ಹರಿದು ಬರುತ್ತಿರುವ ಟ್ರಾಕ್ಟರ್ ರ‌್ಯಾಲಿಗಳೆಲ್ಲಾ ದಿಲ್ಲಿ ದೊರೆಗಳ ನಿದ್ದೆಗೆಡಿಸಿದೆ. ಗಣರಾಜ್ಯೋತ್ಸವದಲ್ಲಿ ಭಾಗವಹಿಸಬೇಕಾಗಿದ್ದ ಬ್ರಿಟನ್ ಪ್ರಧಾನಿ ಹಿಂಜರಿದಿರುವುದು ಕೇಂದ್ರಕ್ಕೆ ತೀವ್ರ ಮುಖಭಂಗ ತಂದಿದೆ. ಈ ತೀಕ್ಷ್ಣ ಚಳುವಳಿಗೆ ನಿಧಾನಗತಿ ನೀಡಲು, ಮತ್ತು ಹೋರಾಟ ನಿರತ ರೈತರನ್ನು ಹಿಮ್ಮೆಟ್ಟಿಸಲು ಸುಪ್ರೀಂಕೋರ್ಟನ್ನು ಮಧ್ಯಪ್ರವೇಶಿಸುವಂತೆ ಕೇಂದ್ರ ಸರಕಾರ ಹರಕತ್ತು ನಡೆಸಿದೆ. ಆ ಮೂಲಕ ಸುಪ್ರೀಂ ಕೋರ್ಟ್ ಹೊರಡಿಸಿದ ಮಧ್ಯಂತರ ಆದೇಶ ಮತ್ತು ಅದು ರಚಿಸಿದ ಸಮಿತಿಯು ರೈತ ಚಳುವಳಿಗೆ ಬ್ರೇಕ್ ಹಾಕಿ ಆಳುವ ಮತ್ತು ಕಾರ್ಪೊರೇಟ್ ವರ್ಗದ ಹಿತಾಸಕ್ತಿಗಳನ್ನು ರಕ್ಷಿಸುವ ಉದ್ದೇಶವನ್ನಷ್ಟೇ ಹೊಂದಿದೆ. ಇದೆಲ್ಲವೂ ಸದ್ಯಕ್ಕೆ ದೇಶದಲ್ಲಿ ನಡೆಯುತ್ತಿರುವ ವಿದ್ಯಾಮಾನ.

ಧರ್ಮದ ಹೆಸರಲ್ಲಿ ದೇಶ ಆಳುವ ಬಿಜೆಪಿ ಅನ್ನದಾತನಿಗೆ ನೀಡುವ ಗೌರವ, ನಡೆಸಿಕೊಳ್ಳುವ ರೀತಿ ಹೇಗೆ-ಏನೆಂಬುದಕ್ಕೆ ಸದ್ಯಕ್ಕೆ ನಡೆಯುತ್ತಿರುವ ವಿದ್ಯಾಮಾನಗಳೇ ಸಾಕ್ಷಿ. ಈ ವೇಳೆಗೆ ಇಸ್ಲಾಂ ಕೃಷಿಗೆ ಮತ್ತು ಕೃಷಿಕನಿಗೆ ನೀಡಿದ ಮಹತ್ವ, ಪ್ರೋತ್ಸಾಹ, ಗೌರವಗಳು ಪ್ರಸಕ್ತವೆನಿಸುತ್ತದೆ. ಆ ನಿಟ್ಟಿನಲ್ಲಿ ನಾನು ನಡೆಸಿದ ಸಣ್ಣ ಅಧ್ಯಯನವನ್ನು ಕೆಲವು ಬರೆಹ ಮಾಲಿಕೆಗಳಾಗಿ ನಿಮ್ಮ ಮುಂದಿಡುತ್ತಿದ್ದೇನೆ. ಓದಿ ಅಭಿಪ್ರಾಯ ತಿಳಿಸಿದರೆ ಈ ಪ್ರಯತ್ನ ಸಾರ್ಥಕ ಎಂಬುದು ನನ್ನ ಅನಿಸಿಕೆ.


ಇಸ್ಲಾಂ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದ್ದು ಮದೀನಾದಲ್ಲಿ. ಅಷ್ಟರವರೆಗೆ ಬಹಿರ್ದೆಸೆಗೆ ಸಿಲುಕಿದ್ದ ಮದೀನಾದ ಕೃಷಿ ಕ್ಷೇತ್ರವು ಆ ಬಳಿಕ ಹಲವು ರೀತಿಯಲ್ಲಿ ಪ್ರಗತಿಯನ್ನು ಕಂಡಿತು. ಮದೀನಾದ ಇಕ್ಕೆಲಗಳಲ್ಲಿ ಖರ್ಜೂರಗಳ ತೋಟವು ಕಂಗೊಳಿಸತೊಡಗಿದವು. ಮಕ್ಕಾದಿಂದ ಬಂದಿದ್ದ ಮುಹಾಜಿರ್‌(ಪಲಾಯಣ ನಡೆಸಿದ)ಗಳಾದ ಸ್ವಹಾಬಿಗಳು ಈ ತೋಟಗಳನ್ನು ಹೆಚ್ಚಿನ ಮುತುವರ್ಜಿ ವಹಿಸಿ ಪೋಷಿಸಿದರು. ಅವರ ಪ್ರಧಾನ ಕಸುಬು ಕೃಷಿಯಾಗಿತ್ತು. ಇಸ್ಲಾಮೀ ನಾಗರಿಕತೆಯಲ್ಲಿ ಕೃಷಿಗೆ ಹೆಚ್ಚಿನ ಪ್ರಾಮುಖ್ಯತೆಯಿತ್ತು. ಶತಮಾನಗಳ ಕಾಲ ನೆಲೆ ನಿಂತಿದ್ದ ಇಸ್ಲಾಮೀ ಖಿಲಾಫತ್‌ನ ಪ್ರಾಬಲ್ಯಕ್ಕೆ ಅರೇಬಿಯಾದ ವಿವಿಧ ಪ್ರದೇಶಗಳಲ್ಲಿನ ಆಹಾರ ಸ್ವಾವಲಂಬನೆಯೇ ಪ್ರಮುಖ ಕಾರಣವಾಗಿತ್ತು. ಇಸ್ಲಾಮೀ ಆಡಳಿತಕ್ಕೆ ಆರ್ಥಿಕ ಭಧ್ರತೆ ಒದಗಿಸಿದ್ದೂ ಆಗಮೆ ವ್ಯವಸ್ಥೆಯೇ ಆಗಿತ್ತು.

ಕೃಷಿಯಲ್ಲಿ ತೊಡಗಿಸಿಕೊಳ್ಳಲು ಮುಸ್ಲಿಮರಿಗೆ ಹೆಚ್ಚಿನ ಪ್ರೇರಣೆ ನೀಡಿದ್ದು ಖುರ್‌ಆನಿನ ವಚನಗಳಾಗಿದ್ದವು. ಶ್ರಮಿಕ ಬದುಕಿಗೆ ಹೆಚ್ಚಿನ ಆದ್ಯತೆ ನೀಡಿದ ಇಸ್ಲಾಂ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹವನ್ನು ನೀಡಿತು. ತನ್ನ ಭೂಮಿಯಲ್ಲಿ ದುಡಿಯಲು, ಮತ್ತು ದುಡಿಮೆ ಯಿಂದ ಬಂದ ಫಲವನ್ನು ತಿನ್ನಲು ಅಲ್ಲಾಹನು ನಿರ್ದೇಶಿಸಿದ.
“ಅವನು ನಿಮಗೆ ಭೂಮಿಯನ್ನು ಅಧೀನಗೊಳಿಸಿ ಕೊಟ್ಟನು. ಆದುದರಿಂದ ನೀವು ಅದರ ಪಾರ್ಶ್ವಗಳಲ್ಲಿ ನಡೆದಾಡಿರಿ ಮತ್ತು ಅಲ್ಲಾಹನ ಆಹಾರದಿಂದ ನೀವು ತಿನ್ನಿರಿ..”
ಸಸ್ಯಗಳಲ್ಲಿನ ಸೃಷ್ಟಿಕರ್ತನ ಚಮತ್ಕಾರ, ವಿಸ್ಮಯ, ಪ್ರಯೋಜನ ಮತ್ತು ಕೃಷಿಯ ಬೆಳವಣಿಗೆಯಲ್ಲಿ ಮನುಷ್ಯನಿಗಿರುವ ಧೃಷ್ಟಾಂತವನ್ನು ಅನೇಕ ಸ್ಥಳಗಳಲ್ಲಿ ಅಲ್ಲಾಹನು ವಿವರಿಸಿದ್ದಾನೆ.
“ನಿರ್ಜೀವ ಭೂಮಿಯು ಇವರಿಗೊಂದು ನಿದರ್ಶನ ವಾಗಿದೆ. ನಾವು ಅದನ್ನು ಸಜೀವ ಗೊಳಿಸಿದ್ದೇವೆ. ಅದರಿಂದ ಧಾನ್ಯಗಳನ್ನು ಹೊರತಂದಿದ್ದೇವೆ. ಅದರಿಂದಲೇ ಅವರು ಉಣ್ಣುತ್ತಾರೆ.”
ಇನ್ನೊಂದು ಆಯತ್ ಹೀಗಿದೆ;
“ಇವರು ಭೂಮಿಯತ್ತ ನೋಡುವುದಿಲ್ಲವೇ.? ಅದರಲ್ಲಿ ನಾವು ಸಕಲ ರೀತಿಯ ಉತ್ತಮ ಗುಣಮಟ್ಟದ ಸಸ್ಯಗಳನ್ನು ಮೊಳಕೆಯೊಡೆಯುವಂತೆ ಮಾಡಿದ್ದೇವೆ..”
ಅದೇ ರೀತಿ ಜನರಿಗೆ ಫಲಪ್ರದವಾಗದ ಅಥವಾ ಮಾರಕವಾದ ಅನಗತ್ಯ ಬೆಳೆಗಳನ್ನು ಬೆಳೆಸಬಾರದೆಂದೂ ಪ್ರಸ್ತಾಪಿಸುವ ಆಯತ್‌ವೊಂದು ಹೀಗಿದೆ.
“ಭೂಮಿಯಲ್ಲಿ ನಿಗದಿತ ಪ್ರಮಾಣದಲ್ಲಿ ಗಿಡಮರಗಳು ಮೊಳಕೆಯೊಡೆಯುವಂತೆ ಮಾಡಲಾಗಿದೆ”
“ಭೂಮಿಯನ್ನು ನಾವು ವಿಶಾಲಗೊಳಿಸಿದೆವು. ಅದರಲ್ಲಿ ಪರ್ವತಗಳನ್ನು ಸುಧೃಢಗೊಳಿಸಿದೆವು‌ ಅದರಲ್ಲಿ ಸರ್ವ ರೀತಿಯ ಗಿಡಗಳನ್ನೂ ನಿರ್ದಿಷ್ಟ ಪ್ರಮಾಣದಲ್ಲಿ ಮೊಳಕೆ ಒಡೆಯುವಂತೆ ಮಾಡಿದ್ದೇವೆ.”

ಹೀಗೆ ಖುರ್‌ಆನಿನ ಹಲವು ವಚನಗಳು ಮುಸ್ಲಿಮರಿಗೆ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಉತ್ತೇಜನವನ್ನು ನೀಡಿದವು. ಯಾರಿಗಾದರು ಭೂಮಿಯಿದ್ದರೆ ಅದನ್ನು ಬರಡಾಗಲು ಬಿಡದೆ ಕೃಷಿ ನಡೆಸುವಂತೆ ಪ್ರವಾದಿ(ಸ) ಮರು ಆದೇಶಿಸುತ್ತಿದ್ದರು. ಆ ಕುರಿತಾದ ವಚನವೊಂದು ಹೀಗಿದೆ; “ಯಾರಿಗಾದರೂ ಖಾಲಿ ಭೂಮಿಯಿದ್ದರೆ ಅದರಲ್ಲಿ ಕೃಷಿ ನಡೆಸಲಿ, ಅಥವಾ ಕೃಷಿ ನಡೆಸುವವರಿಗೆ ಬಿಟ್ಟು ಕೊಡಲಿ, ಇವೆರೆಡೂ ಮಾಡದೆ ಬರಡಾಗಲು ಬಿಟ್ಟರೆ ಆ ಭೂಮಿಯನ್ನು ಅವನಿಂದ ಬಲತ್ಕಾರವಾಗಿ ಪಡೆದು ಕೃಷಿ ನಡೆಸುವವರಿಗೆ ನೀಡಬೇಕು.”
ಭೂಮಿಯ ನಿಜವಾದ ಒಡೆಯ ಅಲ್ಲಾಹನಷ್ಟೇ. ಮನುಷ್ಯನಿಗೆ ಆತ ಅದನ್ನು ಬಳಸಲೋಸ್ಕರ (ಬೇಸಾಯ, ಉಳುಮೆ, ಬಿತ್ತನೆ ಇತ್ಯಾದಿ…) ನೀಡಿರುವನು. ಅದ್ದರಿಂದ ಆ ಭೂಮಿಯನ್ನು ಬಂಜರಾಗಲು ಬಿಡದೆ, ಕೃಷಿ ನಡೆಸುವವರಿಗೆ ನೀಡಬೇಕೆಂದೂ, ಹಾಗೆ ನೀಡದಿದ್ದರೆ ಆತನಿಂದ ಬಲಾತ್ಕಾರವಾಗಿ ಪಡೆಯುವ ಹಕ್ಕು ಇಸ್ಲಾಮೀ ಆಡಳಿತ ವರ್ಗಕ್ಕೆ ಇದೆಯೆಂದೂ ಪ್ರವಾದಿಯವರು ಈ ಹದೀಸಿನಲ್ಲಿ ಸ್ಪಷ್ಟಪಡಿಸುತ್ತಾರೆ. ಒಟ್ಟಿನಲ್ಲಿ ಭೂಮಿಯನ್ನು ಯಾವುದೇ ಕಾರಣಕ್ಕೂ ಬರಡಾಗಲು ಬಿಡಬಾರದೆಂಬುದು ಇಸ್ಲಾಮಿನ ತಾತ್ಪರ್ಯ.

ಅದೇ ರೀತಿ ಜಾರಿಯಾದ (ಸ್ಥಾಯಿಯಾದ) ಸ್ವದಖಗಳನ್ನು ವಿವರಿಸಿದ ಪೈಕಿ ನೆಬಿ(ಸ)ಮರು ಕೃಷಿಯನ್ನೂ ವಿವರಿಸಿರುವುದನ್ನು ಕಾಣಬಹುದು. ಮರಣದ ಬಳಿಕವೂ ಕೃಷಿಕ ಮಾಡಿದ ಕೃಷಿ ಆತನ ಖಬರ್‌ನಲ್ಲಿ ಫಲಪ್ರದವಾಗಲಿದೆಯೆಂದು ಹದೀಸ್‌ನಲ್ಲಿ ಕಾಣಬಹುದು. ‘ನಾಳೆ‌ ಲೋಕಾಂತ್ಯವಾಗುವುದು ಖಚಿತವಾದರೂ ನಿಮ್ಮ ಕೈಯಲ್ಲಿ ಸಸಿಯೊಂದಿದ್ದರೆ ಅದನ್ನು ನೆಟ್ಟು ಬಿಡಿ ಎಂಬ ಪ್ರವಾದಿ ವಚನ ಕೃಷಿಯ ಮಹತ್ವದ ಅಗಾಧತೆಯನ್ನು ತೆರೆದು ತೋರುತ್ತದೆ. ಪ್ರವಾದಿಯವರು ತನ್ನ ಬೋಧನೆಗಳ ನಡುವೆ ಕೃಷಿಯ ಮಹತ್ವದ ಬಗ್ಗೆ ವಿವರಿಸುತ್ತಿದ್ದರು. ಮತ್ತು ಅದರಲ್ಲಿ ತೊಡಗಿಸಿಕೊಳ್ಳಲು ಹುರಿದುಂಬಿಸುತ್ತಿದ್ದರು. ಗದ್ದೆ, ತೋಟಗಳಲ್ಲಿ ತೊಡಗಿಸಿಕೊಂಡ ಅನುಯಾಯಿಗಳ ಬಳಿ ತೆರಳಿ ಕೆಲವು ಮಾರ್ಗದರ್ಶನಗಳನ್ನು ನೀಡುವುದು ಪ್ರವಾದಿಯವರ ವಾಡಿಕೆಯಾಗಿತ್ತು.

ಹೀಗೆ ಇಸ್ಲಾಂ ಕೃಷಿಗೆ ನೀಡಿದ ಮಹತ್ವವು ಮುಸ್ಲಿಮರನ್ನು ಕೃಷಿ, ಬೇಸಾಯ, ವ್ಯವಸಾಯದಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸಿತು. ಕೃಷಿಗೆ ಸಿಕ್ಕ ಈ ಧಾರ್ಮಿಕ ಉತ್ತೇಜನ ಮತ್ತು ಮಾನ್ಯತೆಯಿಂದಾಗಿ ಮುಸ್ಲಿಮರು ನೀರಾವರಿ, ಅಣೆಕಟ್ಟುಗಳನ್ನು ನಿರ್ಮಿಸುವುದು, ಬಾವಿಗಳನ್ನು ಅಗೆಯುವುದು, ಕಾಲುವೆಗಳ ನಿರ್ಮಾಣ ಮತ್ತು ನದಿಗಳನ್ನು ತೆರೆಯುವುದು, ಕರೆಗಳನ್ನು ಪುನಶ್ಚೇತನಗೊಳಿಸುವುದು ಮುಂತಾದ ಪ್ರಗತಿ ಕಾರ್ಯಗಳಲ್ಲೂ ತಮ್ಮನ್ನು ತೊಡಗಿಸಿಕೊಂಡರು.

ಪ್ರಾಚೀನ ಕಾಲದಿಂದಲೂ ಮದೀನಾವನ್ನು ಮರುಭೂ ಮಿಯ ಓಯಸಿಸ್ ಎಂದೇ ಕರೆಯಲಾಗುತ್ತಿತ್ತು. ಮರುಭೂಮಿಯ ಇತರ ಯಾವ ಭಾಗದಲ್ಲೂ ಇರದ ಹೇರಳ ನೀರು ಮತ್ತು ಫಲವತ್ತಾದ ಮಣ್ಣು ಮದೀನದ ವಿಶಿಷ್ಟತೆಯಾಗಿತ್ತು. ಕಣಿವೆಯ ಮೂರು ಬದಿಗಳಿಂದ, ಅಂದರೆ ಪೂರ್ವ, ಪಶ್ಚಿಮ ಮತ್ತು ದಕ್ಷಿಣದಿಂದ ಹರಿಯುವ ನೀರು ಉಪಕ್ರಮವಾಗಿ ಉತ್ತರ ಭಾಗದಲ್ಲಿ ಸಂಗ್ರಹಣೆಯಾಗುತ್ತಿತ್ತು. ವಾದಿಲ್ ಕನಾತ್, ವಾದಿಲ್ ಮುಧೈಬ್, ವಾದಿಲ್ ಮಹ್‌ಜೂರ್, ವಾದಿಲ್ ಬಾಧ್ಸನ್, ಮತ್ತು ವಾದಿಲ್ ಅಕಿಕ್ ಮುಂತಾದವು ಮದೀನಾದ ಅತ್ಯಂತ ಪ್ರಸಿದ್ದ ತೊರೆಗಳಾಗಿವೆ. ಕಣಿವೆಗಳಿಂದ ಹರಿದ ಈ ತೊರೆಗಳು ಬಾವಿ, ತೋಟ, ಹೊಲಗಳನ್ನು ತುಂಬಿ ಹರಿಯುತ್ತವೆ. ಭೂಮಿಯನ್ನು ಸದಾ ಚೈತನ್ಯವಾಗಿಡುತ್ತದೆ. ಹೀಗೆ ನೈಸರ್ಗಿಕ ನೀರಾವರಿಯಿಂದಾಗಿ ಬೆಳೆಗಳು ಬೆಳೆಯುವ ಅತ್ಯಂತ ಫಲವತ್ತಾದ ಮಣ್ಣಾಗಿ ಮದೀನಾದ ಮಣ್ಣು ಮಾರ್ಪಟ್ಟಿದೆ. ಈ ಪ್ರಾಕೃತಿಕ ರಮ್ಯತೆಯು ಹಲವು ವಲಸೆಗಾರರನ್ನು ಇಲ್ಲಿಗೆ ಆಕರ್ಷಿಸಿದವು. ಯಸ್ರಿಬ್ ನಗರವನ್ನು (ಮದೀನಾದ ಪುರಾತನ ಹೆಸರು) ಸ್ಥಾಪಿಸಿದ ಬಿನ್ ಖಾನಿಯಾರಿಂದ ಹಿಡಿದು ಯಮನ್‌ನಿಂದ ಹೊರಟು ಬಂದ ಔಸ್-ಖಝ್ರಜ್ ಬುಡಕಟ್ಟು ಜನಾಂಗಗಳ ತನಕ ಈ ಪರಂಪರೆ ಮುಂದುವರಿಯಿತು. ಈ ನಡುವೆ ಹಲವು ಗೋತ್ರಾಳುಗಳು ಇಲ್ಲಿಗೆ ಬಂದು ವ್ಯವಸಾಯ, ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ಆದ್ದರಿಂದ ಕೃಷಿ, ಬೇಸಾಯವೇ ಯಸ್ರಿಬ್ ಜನತೆಯ ಪ್ರಮುಖ ದುಡಿಮೆಯೂ, ಆದಾಯದ ಮೂಲವೂ ಆಗಿತ್ತು.

ಪ್ರವಾದಿ(ಸ)ಮರು ಮತ್ತು ಅನುಯಾಯಿಗಳು ಮದೀನಾಗೆ ಆಗಮಿಸುವ ವೇಳೆಗೆ‌ ಉತ್ತರಕ್ಕೆ ಉಹ್ದ್ ಪರ್ವತದಿಂದ ಹಿಡಿದು ದಕ್ಷಿಣಕ್ಕೆ ಐರಾ ಪರ್ವತದವರೆಗೂ, ಪೂರ್ವಕ್ಕೆ ವಾದಿ ಕನಾತ್‌ನಿಂದ ಹಿಡಿದು ಪಶ್ಚಿಮಕ್ಕೆ ಅಲ್ ಅಕೀಕ್‌ವರೆಗೂ ಮದೀನಾದ ಕೃಷಿ ಭೂಮಿಯು ವಿಸ್ತರಿಸಿಕೊಂಡಿತ್ತು. ಹಲವು ಗೋತ್ರಗಳು ಈ ಭೂಮಿಯಲ್ಲಿ ಸಣ್ಣ ಪುಟ್ಟ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ಅದರಲ್ಲೂ ಜೂದ ಬುಡಕಟ್ಟು ಜನಾಂಗ ಕೃಷಿಯಲ್ಲಿ ಹೆಚ್ಚಿನ ಪ್ರಾಬಲ್ಯ ಮೆರೆದಿದ್ದರು. ಅವರ ಪ್ರತಿಯೊಂದು ಗೋತ್ರಕ್ಕೂ ಸ್ವಂತ ಕೃಷಿ ಭೂಮಿ, ಸಲಕರಣೆ, ಮತ್ತು ದವಸ-ಧಾನ್ಯಗಳನ್ನು ಸಂಗ್ರಹಿಸಿಡಲು ಕಣಜಗಳಿದ್ದವು.

ಆ ಕಾಲಕ್ಕೆ ಉತ್ಕೃಷ್ಟ ಗುಣಮಟ್ಟದ, ಮತ್ತು ಔಷಧೀಯ ಗುಣಗಳುಳ್ಳ ಖರ್ಜೂರಗಳನ್ನು ಈ ಕೃಷಿ ಭೂಮಿಯಲ್ಲಿ ಬೆಳೆಯಲಾಗುತ್ತಿತ್ತು. ಪ್ರಾಚೀನ ಕಾಲದಲ್ಲೇ ಈ ಖರ್ಜೂರದ ಖರೀದಿಗಾಗಿ ಮಕ್ಕಾ ಸಮೇತ ವಿವಿಧ ಅರಬ್ ಗೋತ್ರಾಳುಗಳು ಮದೀನಾ ಸಂದರ್ಶಿಸುತ್ತಿದ್ದರು. ಮುಸ್ಲಿಮರು ಬನೂ ನಳೀರ್ ಗೋತ್ರಾಳುಗಳ ಮೇಲೆ ಮುತ್ತಿಗೆ ಹಾಕಿದಾಗ, ಅವರು ಮುಸ್ಲಿಮರ ಬರ್ಜೂರದ ಮರಗಳನ್ನು ಸುಡುವ ಬೆದರಿಕೆ ಹಾಕಿದ್ದರು. ಆದರೆ ಶತ್ರುಪಡೆಯೊಂದಿಗೆ ಮುಯ್ಯಿ ತೀರಿಸಲು ಅವರ ಕೃಷಿಯನ್ನು ಹಾನಿಮಾಡುವುದು, ಖರ್ಜೂರ ಮರಗಳನ್ನು ಮುರಿಯುವುದು, ಗದ್ದೆ, ತೋಟಗಳಿಗೆ ಬೆಂಕಿ ಹಂಚುವುದು ಮುಂತಾದ ಕುತ್ಸಿಕತೆಯನ್ನು ಇಸ್ಲಾಂ ಖಂಡತುಂಡವಾಗಿ ವಿರೋಧಿಸಿತು. ರೋಂಗೆ ಯುದ್ದಕ್ಕಾಗಿ ತೆರಳಲು ಸನ್ನಾಹರಾದ ತನ್ನ ಅನುಯಾಯಿಗಳಿಗೆ ಖಲೀಫಾ ಅಬೂಬಕರ್ (ರ)ನೀಡಿದ ಪ್ರಸಿದ್ದ ಉಪದೇಶಗಳ ಪೈಕಿ ‘ನೀವು ಯಾವುದೇ ಕಾರಣಕ್ಕೂ ಶತ್ರುಗಳ ಕೃಷಿಗಳನ್ನು ಕೆಡಿಸದಿರಿ, ಫಲ ನೀಡುವ ಮರಗಳನ್ನು ಕೊಯ್ಯದಿರಿ, ಖರ್ಜೂರ ಮರಗಳನ್ನು ಸುಡದಿರಿ’ ಎಂದೂ ಕಿವಿ ಮಾತನ್ನು ನೀಡಿದ್ದರು.

ಖರ್ಜೂರದ ಹೊರತಾಗಿ ಧ್ರಾಕ್ಷಿ ಬೆಳೆಯೂ ಮದೀನಾದ ಪ್ರಮುಖ ಬೆಳೆಯಾಗಿತ್ತು. ಜತೆಗೆ ಇತರ ತರಕಾರಿಗಳನ್ನೂ ಬೆಳೆಯಲಾಗುತ್ತಿತ್ತು. ಹೀಗೆ ಬೆಳೆದ ತರಕಾರಿಗಳಿಗೆ ಪ್ರಾದೇಶಿಕವಾಗಿ ಹೆಚ್ಚಿನ ಬೇಡಿಕೆಯಿತ್ತು. ಪ್ರವಾದಿಯವರ ಕಾಲದಲ್ಲಿ ಕೃಷಿ ಕ್ಷೇತ್ರವು ಪ್ರಗತಿಯನ್ನು ಕಂಡವು. ಮಕ್ಕಾದಿಂದ ಆಗಮಿಸಿದ್ದ ಮುಹಾಜಿರ್‌ಗಳ ಪೈಕಿ ಹೆಚ್ಚಿನವರೂ ಕೃಷಿಕರಾಗಿರಲಿಲ್ಲ. ಆದರೆ ಮದೀನಾದ ವಾತಾವರಣ ಅವರನ್ನು ಕೃಷಿ ವೃತ್ತಿಗೆ ತೆರೆದುಕೊಳ್ಳುವಂತೆ ಮಾಡಿತು. ಅವರು ತಮ್ಮನ್ನು ಈ ಕೃಷಿ ಭೂಮಿಗಳಲ್ಲಿ ತೊಡಗಿಸಿಕೊಂಡರು. ಬಾವಿಗಳಿಂದ ನೀರು ಸೇದಿ ಗಿಡಗಳಿಗೆ ಸಿಂಪಡಿಸುವುದು, ಬೆಳೆಗಳನ್ನು ಕೊಯ್ಲು ಮಾಡುವುದು ಮತ್ತು ನೆಡುವುದು, ಬಿತ್ತನೆ ಮತ್ತು ಬೀಜನೆ ಮಾಡುವುದು, ಖರ್ಜೂರ ಮರದ ಬುಡಗಳನ್ನು ನೇರ್ಪುಗೊಳಿಸುವುದು, ಮಣ್ಣನ್ನು ಹದ ಮಾಡುವುದು ಹೀಗೆ ಕೃಷಿಯು ಅವರಿಗೆ ನಿತ್ಯ ಕಾಯಕವಾದವು. ಆದರೆ ಇಸ್ಲಾಮೀ ಆಡಳಿತ ಸ್ಥಾಯಿ ಯಾಗುತ್ತಿದ್ದಂತೆ ಮುಸ್ಲಿಮರಿಗೆ ಅನೇಕ ಯುದ್ದಗಳನ್ನು ಎದುರಿಸಬೇಕಾಯಿತು. ಹೀಗೆ ಯುದ್ದಕ್ಕಾಗಿ ತೆರಳಬೇಕಾದ ಅನಿವಾರ್ಯತೆ ಬಂದಾಗ ಅವರಿಗೆ ಕೃಷಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದು, ಅತ್ತ ಗಮನ ಹರಿಸುವುದು ಅಸಾಧ್ಯವಾದವು. ಆದರೆ ಯುದ್ದಗಳಲ್ಲಿ ಖೈದಿಗಳಾಗಿ ಬಂಧಿಸಲ್ಪಟ್ಟ ಸೆರೆಯಾಳು ಗಳಿಗೆ ಈ ಕೃಷಿ ಸ್ಥಳಗಳಲ್ಲಿ ತೊಡಗಿಸಿಕೊಳ್ಳುವ ಅವಕಾಶವನ್ನು ಇಸ್ಲಾಂ ನೀಡಿತು. ವಿವಿಧ ನಾಡುಗಳಿಂದ ಬಂಧಿಸಲ್ಪಟ್ಟ ಸೆರೆಯಾಳುಗಳ ಪೈಕಿ ನಿಪುಣ ಕೃಷಿಕರಿದ್ದರು. ಇದರಿಂದಾಗಿ ಮದೀನಾದ ಕೃಷಿ ಕ್ಷೇತ್ರ ವಿಫುಲತೆಯನ್ನು ಪಡೆಯಿತು‌. ಮದೀನಾದ ಕಣಿವೆಯಿಂದ ಉಸ್ಮಾನ್ (ರ)ರವರು ತೋಟಗಾರಿಕೆಗೆ ತೊರೆಯೊಂದನ್ನು ನಿರ್ಮಿಸಿದ್ದರು. ಅದರ ನಿರ್ಮಾಣ ಕಾರ್ಯದಲ್ಲಿ ಮೂರು ಸಾವಿರಕ್ಕೂ ಅಧಿಕ ವಿದೇಶಿಗಳಾದ ಯುದ್ದಖೈದಿಗಳು ಪಾಲ್ಗೊಂಡಿದ್ದರು.

ಇಸ್ಲಾಂ ಪ್ರಾಬಲ್ಯ ಸ್ಥಾಪಿಸುತ್ತಿದ್ದಂತೆ ಮದೀನಾದಿಂದ ಪಲಾಯಣಗೈದ ಯಹೂದಿ ಬುಡಕಟ್ಟು ಜನಾಂಗಗಳ ಭೂಮಿಯು ಮುಸ್ಲಿಮರಿಗೆ ಅನುವಂಶಿಕವಾಗಿ ಲಭಿಸಿದವು. ಈ ಸ್ಥಳಗಳನ್ನೂ ಕೃಷಿ ಭೂಮಿಯಾಗಿ ಮಾರ್ಪಡಿಸಲಾಯಿತು. ಪ್ರವಾದಿ (ಸ)ಮರು ಕೃಷಿಗೆ ಅಪಾರ ಮಹತ್ವ, ಮತ್ತು ಪ್ರೋತ್ಸಾಹವನ್ನು ನೀಡಿದ್ದರಿಂದ ಇತರ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದವರು ಅದನ್ನು ತೊರೆದು ಕೃಷಿಯಲ್ಲಿ ಮಗ್ನರಾಗತೊಡಗಿದರು. ಕೃಷಿ ನಡೆಸಲು ಯೋಗ್ಯ ಭೂಮಿ ಇಲ್ಲದವರು ಹೊಸ ಜಾಗವನ್ನು ಖರೀದಿಸಲಾರಂಭಿಸಿದರು‌. ಅಮ್ರುಬ್ನು ಆಸ್ (ರ)ರಿಗೆ ತ್ವಾಯಿಫ್‌ನಲ್ಲಿ ಅಲ್ ಮಹತ್ ಎಂಬ ಹೆಸರಿನ ಬೃಹತ್ ತೋಟವೊಂದಿತ್ತು. ಅದರ ಒಂದು ಮರಕ್ಕೆ ಒಂದು ದಿರ್ಹಂನಂತೆ ಬೆಲೆ ಕೊಟ್ಟು ಅವರದನ್ನು ಖರೀದಿಸಿದ್ದರು. ಹೀಗೆ ಮದೀನಾದಲ್ಲಿ ಕೃಷಿ ಕ್ರಾಂತಿಗೆ ಇಸ್ಲಾಂ ಮುನ್ನುಡಿ ಬರೆಯಿತು. ಮದೀನಾ ಹಸಿರುಲತೆಗಳಿಂದ ತುಂಬಿ ತುಳುಕು ತೊಡಗಿದವು..

•••ಮುಂದುವರಿಯುವುದು..

~ಟಿ.ಎಂ ಅನ್ಸಾರ್ ಸ‌ಅದಿ ತಂಬಿನಮಕ್ಕಿ