Latest Posts

ಪ್ರತಿಬಿಂಬ – ಪ್ರತಿ ಮನಸ್ಸಿನ ಭಾವನೆಗಳ ಛಾಯೆ (ಕಾದಂಬರಿ, ಸಂಚಿಕೆ – 3)

    -ಶರೀನಾ ಸಲೀಮ್
     
          ಸುರಯ್ಯಾಳ ಹಿಂದೆಯೇ ಬಂದ ಸಫಿಯ್ಯಾದ ”  ಅರೇ ಬರೋದಿಲ್ಲ ಅಂದರೆ ಏನು? ಹಾಗೆ ಹೇಳಿದರೆ ಆಗುತ್ತಾ? ನಿನ್ನ ಪರೀಕ್ಷೆ ಮುಗಿಯಲು ಎಂದೇ ಅಲ್ಲವೇ ನಾವು ಕಾದಿದ್ದು.. ಈಗ ನೀನು ಹೀಗೆ ಹೇಳಿದರೆ ಆಗುತ್ತಾ? “

” ಆದ್ರೆ ಅಮ್ಮಾ ನಾನು ಯಾವತ್ತೂ ನಿಮ್ಮಲ್ಲಿ ಅಲ್ಲಿ ಹೋಗೋ ವಿಚಾರ ಹೇಳಿಯೇ ಇಲ್ಲ ಅಲ್ವಾ. ಮತ್ತೆ ನೀವು ಯಾಕೆ ನನ್ನನ್ನು ಕಾಯೋದು ಹೇಳಿ?”

“ಸುರಯ್ಯಾ, ಅದು ನಿನ್ನ ಅಜ್ಜಿ ಮನೆ ಕಣೇ. ಅಜ್ಜ- ಅಜ್ಜಿ ನೋಡಬೇಕು ಎಂದು ಮನಸಾಗಲ್ವ ನಿನಗೆ ಹೇಳು ? “

“ಅಮ್ಮಾ ನೀವು ಹೋಗೋದನ್ನು ನಾನು ತಡೆದಿಲ್ಲ.  ಆದರೆ ನಾನು ಬರೋದಿಲ್ಲ ಅಷ್ಟೇ. ಅವರ ಮೇಲೆ ನನಗೆ ಪ್ರೀತಿ ಇದೆ. ಅವರಿಗೋಸ್ಕರ ನಾನು  ಯಾವತ್ತೂ ಪ್ರಾರ್ಥಿಸುತ್ತೇನೆ. ಆದರೆ ಅಲ್ಲಿಗೆ ಬರೋದಿಲ್ಲ ಅಮ್ಮಾ ಪ್ಲೀಸ್”

” ಸರಿ ಹಾಗಿದ್ದಲ್ಲಿ. ಒತ್ತಾಯ ಮಾಡೋದಿಲ್ಲ. ನಾವು ಹೋಗಿ ಒಂದೆರಡು ದಿನ ಕುಳಿತು ಬರುತ್ತೇವೆ ಸರೀನಾ?

“ಹ್ಞಾಂ ಅಮ್ಮಾ. ಇಲ್ಲಿ ಅಜ್ಜಿ ಇದ್ದಾರಲ್ಲ. ನೀವು ಹೋಗಿ ಬನ್ನಿ . ಇನ್ನು ಅಲ್ಲಿ ಹೋಗಿ ನನ್ನ ಯೋಚನೆ ಮಾಡಿ ಎರಡೇ‌ ದಿನಗಳಲ್ಲಿ ಓಡಿ ಬರಬೇಡಿ. ಅಜ್ಜಿ ನನ್ನನ್ನು ಚೆನ್ನಾಗಿ ನೋಡುತ್ತಾರೆ.”

ಮಾತು ಅಲ್ಲಿಗೇ ಮುಕ್ತಾಯಗೊಂಡಿತು.  ಅವರು ಹೊರಡಲು ಅನುವಾಗುತ್ತಿದ್ದರು.    ಅಷ್ಟರಲ್ಲಿ ಅವಳ ತಂದೆ ಖಾದರಾಕ ಕೂಡ ಬಂದರು. 

  *******************

ತನ್ನ ಹಿಂದೆಯೇ ಬಂದು ನಿಂತಿರುವ ಸೈದಾಳನ್ನು ನೋಡಿ ಏನೂ ಹೇಳದಾದಳು ಮುನೀರಾ.. 

   ನಮಗೆ ಇಷ್ಟು ಗಾಬರಿಯಾಗುವಾಗ ಆಕೆಯಾದರೋ ಹೊರಗಿನವಳು. ಆಕೆ ಅದೆಷ್ಟು ಹೆದರಬೇಡ  ಎಂದು ಮನಸ್ಸಿನಲ್ಲೇ ಅಂದುಕೊಂಡಳು.

“ಸೈದಾ ನೀನೊಂದು ಕೆಲಸ ಮಾಡ್ತೀಯಾ ? ” ಎಂದು ಕೇಳಿದ ಯಜಮಾನ್ತಿಯನ್ನು ತಿರುಗಿ ನೋಡಿದಳು.

“ರೂಮಲ್ಲಿ ನನ್ನ ಮೊಬೈಲ್ ಇದೆ. ಒಮ್ಮೆ  ಹೋಗಿ ಬೇಗ ಅದನ್ನು ತಾ “

ಸರಿ ಎಂದು ಹೋಗಬೇಕು ಅನ್ನುವಷ್ಟರಲ್ಲಿ ಆ ಕಡೆಯಿಂದ ಮತ್ತೆ ಬೊಬ್ಬೆ. ಆಕೆಗೂ ಮತ್ತೂ ಹೆದರಿಕೆ ಆಗಿ ಮುನೀರಾಳತ್ತ ನೋಡಿದಳು.

“ಹೇಳಿದಷ್ಟು ಮಾಡು… ಇಲ್ಲದಿದ್ದಲ್ಲಿ ಇಲ್ಲಿ ನಿಲ್ಲು, ನಾನು ಹೋಗಿ ತರುತ್ತೇನೆ” ಎಂದು ಮುನೀರ ಹೇಳಿದಾಗ

” ಇಲ್ಲಾ ಅಮ್ಮಾವ್ರೇ.. ನೀವು ಇಲ್ಲೇ ನಿಲ್ಲಿ. ನಾನೇ ಹೋಗಿ ತರುತ್ತೇನೆ “ಎಂದು ಕೋಣೆಯತ್ತ ಹೋದಳು.

ಅಯ್ಯೋ ಯಾಕಾದರೂ ಈ ಮನೆ ಕೆಲಸಕ್ಕೆ ಬಂದೆನಾ, ಮೊದಲೇ ತಿಳಿದಿದ್ದರೆ ಬರುತ್ತಿರಲಿಲ್ಲ. ಈಗ ಅಡ್ವಾನ್ಸ್ ತೆಗೆದುಕೊಂಡು ಆಗಿದೆ. ಬಿಡಲೂ ಗೊತ್ತಿಲ್ಲ ಎಂದು ಮನಸ್ಸಿನಲ್ಲೇ ಯೋಚಿಸುತ್ತಾ ಮೊಬೈಲ್ ತೆಗೆದು ಕೊಂಡು ಹೋಗಿ ಕೊಟ್ಟಳು. ಪರಿಸ್ಥಿತಿ ಎಲ್ಲಾ ತಿಳಿಯಾಗಿತ್ತು. ಮನದಲ್ಲಿ ಇದ್ದ ಭಯವೂ ಸೈದಾಳಿಗೆ ಹೋಯಿತು.

ಮುನೀರ ಫೋನ್ ತೆಗೆದುಕೊಂಡು ಯಾರಿಗೋ ಕರೆ ಮಾಡಿ ಮಾತನಾಡುವುದು ಕೇಳಿಸಿತು.

ಒಳಬಂದ ಸುರಯ್ಯಾಳ ತಂದೆ
“ಅರೇ ಆಗಲೇ ಕರೆ ಮಾಡಿ ಹೇಳಿದ್ದೆ ಅಲ್ವಾ ರೆಡಿಯಾಗಿ ಇರಿ ಎಂದು. ನೀನಿನ್ನೂ ರೆಡಿಯಾಗಿ ಇಲ್ವಾ? ” ಎಂದು ಕೇಳಿದರು.

” ಇಲ್ಲ ರೀ, ನಾನು ಸುರಯ್ಯಾ ಬರಲಿ ಎಂದು ಕಾಯುತ್ತಿದ್ದೆ. ಆದ್ರೆ ಆಕೆ ತಾನು ಬರೋದಿಲ್ಲ ಎಂದು ಹೇಳಿದಳು.” ಸಫಿಯ್ಯಾ  ಮರುನುಡಿದರು.

” ಏನು ಸುರಯ್ಯಾ ನೀನು ಹೋಗೋದಿಲ್ವೇ? ” ಎಂಬ ಅಪ್ಪನ ಪ್ರಶ್ನೆಗೆ

” ಇಲ್ಲಾ ಅಪ್ಪ  ” ಎಂದು ನಯವಾಗಿಯೇ ಉತ್ತರಿಸಿದಳು .

“ಸರಿ ನೀವು ಹೊರಡಿ. ನಿಮ್ಮನ್ನು ಅರ್ಧದವರೆಗೆ  ಬಿಟ್ಟು ಬರಬೇಕಾದರೆ ತುಂಬಾ ತಡವಾಗುತ್ತಲ್ವಾ ” ಎಂದು ಅರ್ಜೆಂಟ್ ಮಾಡಿದಾಗ ಸಫಿಯ್ಯಾದ ಬುರ್ಖಾ ಧರಿಸಿ ಹೊರಬಂದರು.

ಅಜ್ಜಿ ಹಾಗೂ ಸುರಯ್ಯಾಳ ಜೊತೆ ಬರುತ್ತೇವೆ ಎಂದು ಹೇಳಿ ಮನೆ ಕಡೆ ಜಾಗ್ರತೆ ಎಂದು ಹೇಳಿ ಅವರು ಅಲ್ಲಿಂದ ತೆರಳಿದರು. 

ಅವರು ಮರೆಯಾಗುವ ತನಕ ನೋಡಿದ ಸುರಯ್ಯಾ ಆಮೇಲೆ ಒಳಗೆ ಬಂದಳು.

” ಅಲ್ಲಾ ಸುರಯ್ಯಾ , ನನಗೆ ನೆನಪಿರುವ ಹಾಗೆ ಸಣ್ಣವಳಿರುವಾಗ  ನೀನು ಯಾವಾಗ ಅಜ್ಜಿ ಮನೆ ಹೋಗೋದು ಎಂದು ಕಾಯುತ್ತಿದ್ದೆ. ಆದರೆ ಈಗ  ಯಾಕೋ ನಿನ್ನಲ್ಲೊಂದು ಬದಲಾವಣೆ ಕಾಣಿಸುತ್ತಾ ಇದೆಯಲ್ವಾ? ಯಾಕೆ ಏನಾಯ್ತು? “

ಅಜ್ಜಿಯ ಪ್ರಶ್ನೆಗೆ ಉತ್ತರಿಸಲಿಲ್ಲ ಸುರಯ್ಯಾ.  ಕೆಲಕ್ಷಣ ಮೌನವಹಿಸಿದಳು. ಮನಸ್ಸು ಭಾರಗೊಂಡಿತ್ತು.

” ಇಲ್ಲಾ ಅಜ್ಜಿ, ಮನಸ್ಸು ಒಪ್ಪುತ್ತಿಲ್ಲ . ಚಿಕ್ಕವಳಿರುವಾಗ ಯಾವುದು ನನ್ನ ಮನಸ್ಸಿಗೆ ಹೊಕ್ಕುತ್ತಿರಲಿಲ್ಲ. ಆದ್ರೆ ಈಗ ಯಾವುದೂ ನನ್ನ ಮನಸ್ಸಿನಿಂದ ಹೋಗುತ್ತಿಲ್ಲ ಅಜ್ಜಿ.”

    ಮೊಮ್ಮಗಳ ಮಾತು ಕೇಳಿ ಅಜ್ಜಿಗೆ ತಿಳಿಯಿತು. ಆಕೆ ಏನೋ ಅಲ್ಲಿ ಮನಸ್ಸಿಗೆ ನೋವು ಅನುಭವಿಸಿದ್ದಾಳೆ. ಇಲ್ಲದಿದ್ದಲ್ಲಿ ಈ ರೀತಿ ಆಡಲಿಕ್ಕಿಲ್ಲ. ಆದರೂ ಕೆದಕುವುದು ಬೇಡ ಎಂದು ಸುಮ್ಮನಾದರು.

ಸುರಯ್ಯಾಳು ಏನೂ ಹೇಳದೆ ತನ್ನ ಕೋಣೆಗೆ ತಾನು ಸೇರಿದಳು. ಯಾಕೋ ಮನಸು ಅಂದಿನ ಆ ದಿನವನ್ನು  ಬೇಡವೆಂದರೂ ಮತ್ತೆ ನೆನಪಿಸಿತು.

ಮುಂದುವರೆಯುವುದು….