Latest Posts

ಪ್ರತಿಬಿಂಬ-ಪ್ರತಿ ಮನಸ್ಸಿನ ಭಾವನೆಗಳ ಛಾಯೆ (ಕಾದಂಬರಿ)

ಶರೀನಾ ಸಲೀಮ್ #ಸಂಚಿಕೆ-4

ಸುರಯ್ಯಾಳ ಮನಸ್ಸು ಹಿಂದಿನ ದಿನಗಳತ್ತ ಓಡಿತು

ಅಂದು ರಜೆ ಬರುವುದನ್ನೇ ಕಾಯುತ್ತಿದ್ದಳು ಸುರಯ್ಯಾ. ಅಜ್ಜಿ ಮನೆಗೆ ಹೋಗೋದು ಅಂದರೆ ಎಲ್ಲಿಲ್ಲದ ಖುಷಿ. ಸಣ್ಣವಳಿರುವಾಗ ಅಮ್ಮನ ದೊಡ್ಡಪ್ಪನ ಮಗನ ( ಅಮ್ಮನ ಕಸಿನ್) ಮಗಳು ಸಹಾನ ಜೊತೆ ಸೇರಿ ಅದೆಷ್ಟು ಆಟವಾಡಿದ್ದು ಉಂಟೋ. ಗುಡ್ಡಗಾಡು ಅಲೆದು ನೇರಳೆ ಕೊಯ್ಯುವುದೋ , ಮಾವಿನ ಹಣ್ಣು ಹೆಕ್ಕಿ ತರುವುದೋ  , ಮಳೆಗಾಲ ಆರಂಭವಾಯಿತೆಂದರೆ ಕುಂಟಾಲ ಹಣ್ಣು  ಕೊಯ್ಯುವುದು ಈ ರೀತಿ ಅವರ ಒಡನಾಟ ಹೆಚ್ಚಿತ್ತು.   ಆಕೆಯೂ ಯಾವಾಗ ಸುರಯ್ಯಾ ರಜೆಯಲ್ಲಿ ಬರುತ್ತಾಳೋ ಎಂದೇ ಕಾಯುತ್ತಿದ್ದಳು. ಸುರಯ್ಯಾ ಬಂದಳು ಎಂದರೆ ಸಹಾನಳಿಗೆ ಇನ್ನು ಯಾರು ಬೇಡ ಎಂದು ಊರವರೇ ಹೇಳುತ್ತಿದ್ದರು.

   ಒಂದು ದಿನ  ಎಷ್ಟೇ ಹೊತ್ತಾದರೂ ಸಹಾನ ಬಾರದೆ ಇರುವುದನ್ನು ಕಂಡಾಗ  ತಾನೇ ಆಕೆಯನ್ನು ಕರೆಯಲು ಎಂದು ಅವರ ಮನೆಯತ್ತ ನಡೆದಳು. ಇನ್ನೇನು ಬಾಗಿಲು ಬಡಿಯಬೇಕು ಎನ್ನುವಷ್ಟರಲ್ಲಿ ಸಹಾನಳ ಅಮ್ಮಾ ಆಕೆಯನ್ನು ಬೈಯ್ಯುತ್ತಿರುವುದು ಕೇಳಿಸಿತು. ಬೇಡವೆಂದರೂ ಆಕೆಯ ಕಿವಿಗಳಿಗೆ ಆ ಮಾತುಗಳು ಕೇಳಿಸಿದವು.

” ಅಲ್ಲಾ ಆ ಹುಡುಗಿಯೊಂದಿಗೆ ಸುತ್ತಾಡಬೇಡ ಎಂದರೆ ನಿನಗೆ ಅರ್ಥ ಆಗೋದಿಲ್ವಾ? ನೀನು ಆಕೆಯ ಮುಖ – ದೇಹ ನೋಡಿದ್ದೀಯಾ ? ಆಕೆಗೆ ದೇಹದ ಭಾಗ ಕಪ್ಪಾಗುವ ಅದ್ಯಾವುದೋ ರೋಗ ಇದೆ. ತಿಳಿದೂ ತಿಳಿದೂ ಆಕೆಯ ಜೊತೆ ಹೋಗುತ್ತೀಯಲ್ಲ  ನಿನಗೆ ಹರಡಿದರೆ ಏನು ಮಾಡ್ತೀಯಾ ಹೇಳು? 

ಅವರ ಬೈಗುಳ ಮುಂದುವರಿಯುತ್ತಿತ್ತು. ಕೇಳಲಾಗದ ಸುರಯ್ಯಾ ಅಲ್ಲಿಂದ ಓಡಿ ಬಂದಿದ್ದಳು.   ತನಗೆ ಇಷ್ಟವಾದ ನದಿಯ ಕಿನಾರೆಯ ಬಳಿ ಕುಳಿತು ಅದೆಷ್ಟು ಹೊತ್ತು ಅತ್ತಳೋ ಆಕೆಗೇ ಗೊತ್ತು. ನದಿಯ ನೀರಲೊಮ್ಮೆ ತನ್ನ ಪ್ರತಿಬಿಂಬ ನೋಡಿದಳು. ಯಾಕೋ ಅದೂ ತನ್ನನ್ನು ಹೀಯಾಳಿಸುತ್ತಿದೆ ಎಂದು ಆಕೆಗೆ ಅನಿಸಿತು.

ಆ ಮುಖದತ್ತ ನೋಡಿದ ಸೈದಾಳಿಗೆ ಈಗ ಕನಿಕರವಾಗುತ್ತಿತ್ತು. ಅಯ್ಯೋ ಆಗ ಇಷ್ಟೆಲ್ಲಾ ಅವಾಂತರ ಮಾಡಿದವ ಇವನೇನಾ ಎಂದು ಎನಿಸದೇ ಇರಲಿಲ್ಲ ಆಕೆಗೆ.  ಆತ ಏನೂ ನಡೆದೇ ಇಲ್ಲ ಎಂಬಂತೆ ಎಲ್ಲೋ ಒಂದು ಕಡೆ ನೋಡಿಯೇ ಇಟ್ಟಿದ್ದ. .

  ಫೋನಲ್ಲಿ ಮಾತನಾಡಿದ ಮನೀರಾ ಕರೆ ಕಟ್ ಮಾಡಿ ಅವನ ಬಳಿ ಹೋದಳು. ಮೆಲ್ಲನೆ ಆತನ ತಲೆ ಸವರಿ ಮಗನೇ ಸಾದ್ ಎಂದು ಕರೆದರು.

ಇಲ್ಲಾ ಆತನಿಂದ ಯಾವುದೇ ಪ್ರತಿಕ್ರಿಯೆ ಇಲ್ಲ. ತನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂಬಂತೆ ಕುಳಿತಿದ್ದ.

ಮುನೀರಾಳ ಕಣ್ಣಿನಿಂದ ಇಳಿದ ಕಣ್ಣೀರು ಕಾಣಿಸದೆ ಇರಲಿಲ್ಲ ಸೈದಾಳಿಗೆ.

ಅರೇ ಏನಾಗಿದೆ ಈ ಹುಡುಗನಿಗೆ ? ನೋಡಲೂ ಇಷ್ಟೊಂದು ಸುಂದರವಾಗಿದ್ದಾನೆ. ಹೊರಗಿನಿಂದ ಏನೂ ಗೊತ್ತಾಗುವುದಿಲ್ಲ. ಆತನಿಗಿರುವ ಸಮಸ್ಯೆಯಾದರೂ ಏನು? ಎಂಬ ಹಲವಾರು ಪ್ರಶ್ನೆಗಳು ಆಕೆಯ ಮನಸ್ಸಿನಲ್ಲಿ ಭುಗಿಲೆದ್ದವು. ಆದರೆ ಕೇಳುವುದಾದರೂ ಯಾರಲ್ಲಿ ಎಂದು ಸುಮ್ಮನಾದಳು. 

ಅಮ್ಮಾವ್ರೇ.. ಮೆಲ್ಲನೆ  ಸೈದಾ ಮುನೀರಾಳನ್ನು   ಕರೆದಳು.
ನೀರಿನಲ್ಲಿ ತನ್ನ ಪ್ರತಿಬಿಂಬ ತನ್ನನ್ನೇ ಅಣಕಿಸಿದಂತಾಯಿತು.
ಹೌದು ಹುಟ್ಟಿದಾಗಲೇ ತನ್ನ ಮುಖದಲ್ಲಿ ಮಚ್ಚೆಯ ರೀತಿಯಲ್ಲಿ ಇತ್ತಂತೆ. ಆದರೆ ತಾನು ಬೆಳೆದಂತೆ ಅದೂ ಬೆಳೆಯತೊಡಗಿತು.  ಇಂದು ತನ್ನ ಅರ್ಧ ಮುಖದಲ್ಲಿ ಅದು ವ್ಯಾಪಿಸಿತ್ತು. ಆದರೆ ಅದೂ ಇನ್ನೊಬ್ಬರಿಗೆ ಹರಡುವಂತ ರೋಗವಂತೂ ಅಲ್ಲ. ಇದರಿಂದಾಗಿ ಜನರು ನನ್ನನ್ನು ಇಷ್ಟು ನಿಂದಿಸುವರು ಎಂದು ಆಕೆಗೆ ಅರಿವಿರಲಿಲ್ಲ.  ಆದರೆ ಇಂದು ಸಹನಾಳ ಅಮ್ಮ ಆಕೆ ಜೊತೆ ಆಡಬೇಡ ಎನ್ನುವಾಗ ಭೂಮಿಯೇ ಬಾಯಿ ತೆರೆದು ತಿನ್ನಬಾರದೆ ಎನ್ನನು ಅನಿಸಿತು ಆಕೆಗೆ. ನಾನೇನು ಅಷ್ಟು ಕೆಟ್ಟವಳೇ ಎನಿಸದಿರಲಿಲ್ಲ ಆಕೆಗೆ.  ಅವತ್ತಿನಿಂದ ಸಹಾನ ತನ್ನನ್ನು ಅವಾಯ್ಡ್ ಮಾಡೋದು ಆಕೆಗೆ ಕಾಣಿಸಿತು. ಎಷ್ಟಾದರೂ ಆಕೆಯ ಸ್ನೇಹ ಮರೆಯಲಾಗಲಿಲ್ಲ. ಆಕೆ ತನ್ನೊಂದಿಗೆ ಸೇರದೆ ಇತರರ ಜೊತೆ ಆಡುವುದು ಮತ್ತಷ್ಟು ದುಃಖಕ್ಕೆ ಒಳಪಡಿಸಿತ್ತು.

“ಸಹಾನ ಯಾಕೆ ನನ್ನನ್ನು ದೂರ ಮಾಡ್ತಿದ್ದೀಯಾ ? ನೀನು ಈ ರೀತಿ ಮಾಡಿದರೆ ನನಗೆ ತುಂಬಾ ಬೇಜಾರಾಗುತ್ತೆ ಕಣೇ ”  ಎಂದು ಸುರಯ್ಯಾ ಹೇಳಿದಾಗ

” ನೋಡು ನನ್ನ ಹತ್ತಿರ ಬರಬೇಡ, ನಿನ್ನ ಮುಖ ಎಂದಾದರೂ ನೋಡಿದ್ದೀಯಾ ? ಎಷ್ಟು ಅಸಹ್ಯವಾಗಿದೆ ಗೊತ್ತಾ? ನಂಗೊತ್ತು ನಂಗೂ ಅತೇ ರೀತಿ ಆಗಬೇಕು ಅಂತ ಅಲ್ವಾ ನಿನ್ನ ಬಯಕೆ? ನಾನು ದಂತದ ಗೊಂಬೆ ಹಾಗೆ ಇದ್ದೇನೆ ಎಂದು ಅಸೂಯೆ ಅಲ್ವಾ… ಆಕೆಯ ಮಾತು ಕೇಳಿ ಉಳಿದ ಮಕ್ಕಳು ಸುರಯ್ಯಾಳತ್ತ ನೋಡಿ ನಗತೊಡಗಿದರು.   ಅಲ್ಲಿ ನಿಲ್ಲಲಾಗದೆ ಸೀದಾ ಮನೆಗೆ ಬಂದಿದ್ದಳು.

” ಅಮ್ಮಾ ಮನೆಗೆ ಹೋಗೋಣ. ಎಷ್ಟು ದಿನ ಇಲ್ಲಿರೋದು ? “ಅಂತ ಆಕೆಯ ಅಮ್ಮನನ್ನು ಒತ್ತಾಯಿಸತೊಡಗಿದಳು.

ಅವಳ ಅಮ್ಮನಿಗೂ ಆಶ್ಚರ್ಯ ಆಗುತ್ತಿತ್ತು. ಇಲ್ಲದಿದ್ದಲ್ಲಿ ಬಂದರೆ ಹೋಗುವ ಮಾತೇ ಎತ್ತುತ್ತಿರಲಿಲ್ಲ. ಏನಾಗಿದೆ ಈಕೆಗೆ ಎಂದು ಯೋಚಿಸುತ್ತಿದ್ದರು. ಸುರಯ್ಯಾಳ ಒತ್ತಾಯ ತಾಳಲಾರದೆ ಕಡೆಗೆ ಅವಳ ತಂದೆಯನ್ನು ಬರಲು ಹೇಳಿದರು.

ಹೇಳಿದ ದಿನದಂತೆ ಅವರು ಕರೆದುಕೊಂಡು ಹೋಗಲು ಬಂದಿದ್ದರು. ತನ್ನ ಮಗಳು ಎಂದಿನಂತೆ ಇಲ್ಲ ಏನೋ ಮಂಕಾಗಿದ್ದಾಳೆ ಎಂದು ಗಮನಿಸಿದ ಆಕೆಯ ತಂದೆ ಏನು ವಿಚಾರ ?ಎಂದು ಕೇಳಿದರು.

ತನ್ನ ದುಃಖ ಯಾರಲ್ಲಾದರೂ ಹೇಳಬೇಕು ಎಂದು ಎನಿಸಿದ್ದ ಸುರಯ್ಯಾಳಿಗೆ ಇದು ಸರಿ ಸಮಯ ಎಂದೆನಿಸಿತು. ಆಕೆ ಎಲ್ಲಾ ವಿಚಾರಗಳನ್ನು ತನ್ನ ತಂದೆಯಲ್ಲಿ ಹೇಳಿದಳು. ಕೇಳಿದ ಅವರ ಮುಖವು ರೋಷದಿಂದ ಕುದಿಯತೊಡಗಿತು. ಅವರು ನೇರವಾಗಿ ಸಹನಾಳ ಮನೆಯತ್ತ ನಡೆದರು.

ಮುಂದುವರೆಯುವುದು…