Latest Posts

ಸಾಯಿ ಪಲ್ಲವಿ ಹೇಳಿಕೆಯನ್ನು ವಿವಾದಾತ್ಮಕ ಬಣ್ಣಕ್ಕೆ ತಿರುಚಿದ ಟಿವಿ ಚಾನೆಲ್ ಗಳು: ವಾಸ್ತವದಲ್ಲಿ ಸಾಯಿ ಪಲ್ಲವಿ ಹೇಳಿದ್ದು ಏನು ಎಂಬುದನ್ನು‌ ಸವಿಸ್ತಾರವಾಗಿ ಕನ್ನಡದಲ್ಲಿ ಬರೆದ ರಮೇಶ್ ಹೆಚ್ಕೆ

ಪತ್ರಕರ್ತ : ನೀವು ಹೊಸ ಸಿನಿಮಾದಲ್ಲಿ ನಕ್ಸಲ್ ಆಗಿ ನಟಿಸುತ್ತಿದ್ದೀರಿ. ಆ ಗನ್ ಮತ್ತು ಸಮವಸ್ತ್ರ ಧರಿಸಿ ನಿಮಗೆ ಹೇಗೆ ಅನ್ನಿಸಿತು, ನೀವು ನಿಮ್ಮ ಬದುಕಿನಲ್ಲಿ ಹೀಗೆ ಓಡಾಡುತ್ತೀನಿ ಅಂತ ಭಾವಿಸಿದ್ದಿರಾ? ಅಥವಾ ಅವರ ಮೇಲೆ ನಿಮಗೇನಾದರೂ ಕರುಣೆ ಬಂದಿದೆಯೇ? ಎಂದು ಕೇಳುತ್ತಾರೆ. ಅದಕ್ಕೆ

ಸಾಯಿ ಪಲ್ಲವಿ : ನಕ್ಸಲ್ ಎನ್ನುವುದೂ ಕೂಡಾ ಒಂದು ಐಡಿಯಾಲಜಿ ಎಂದು ನಂಬಲಾಗಿದೆ ಅಲ್ಲವೇ ಸರ್, ಉದಾಹರಣೆಗೆ ನಮಗೆಲ್ಲರಿಗೂ ಶಾಂತಿಯ ತತ್ವವು ಒಂದು ಐಡಿಯಾಲಜಿ ಆಗಿರುವಂತೆ ಅವರಿಗೆ ಹಿಂಸಾ ಮಾರ್ಗವು ಒಂದು ಐಡಿಯಾಲಜಿ ಆಗಿದೆ. ಇಲ್ಲಿ ನಾನು ಹಿಂಸೆಯ ಐಡಿಯಾಲಜಿ ಎಂಬುದನ್ನು “ Wrong Form of Communication” ಎಂದು ಭಾವಿಸುತ್ತೇನೆ. ಆದರೆ ಅದನ್ನು ನಂಬಿಕೊಂಡವರು “ ಹಿಂಸಾ ಮಾರ್ಗದಿಂದಲೇ ನಾವು ಸಮಾಜದ ದುಷ್ಟ ಶಕ್ತಿಯನ್ನು ಎದುರಿಸುತ್ತೇವೆ, ಅದರಿಂದ ಜನರಿಗೆ ಮತ್ತು ನಮ್ಮ ಕುಟುಂಬಕ್ಕೆ ಒಳ್ಳೆಯದಾಗುತ್ತದೆ ಎಂದು ನಂಬುತ್ತಾರೆ” ಇದು ಸರಿಯಾ ತಪ್ಪಾ ಎಂದು ವಿಮರ್ಶಿಸುವುದು ನಂತರದ ಸಂಗತಿಯಾದರೆ, ಆ ದಾರಿಯನ್ನು ಅವರು ಹಿಡಿದಿರುವುದಕ್ಕೆ ಅವರದ್ದೇ ಕಾರಣವನ್ನು ನೀಡುತ್ತಾರೆ, ಎಂಬುದನ್ನು ನಾವು ಗಮನಿಸಬಹುದು. ಇದು ಈ ಹಿಂದೆ ನಡೆಯುತ್ತಿದ್ದ ಸಂಗತಿಯಾಗಿದ್ದು ಈಗ ಇದರ ಪ್ರಭಾವ ಇಲ್ಲ.

ಗಡಿಗಳ ವಿಭಜನೆಯ ಕಾರಣಕ್ಕೆ ಪಾಕಿಸ್ತಾನಿ ಸೈನಿಕರು ಭಾರತೀಯ ಸೈನಿಕರನ್ನು ಭಯೋತ್ಪಾದಕರು ಎಂದುಕೊಳ್ಳುತ್ತಾರೆ, ಕಾರಣ ಅವರು ನಮಗೆ ಹಾನಿ ಮಾಡುತ್ತಾರೆ, ಎಂಬ ಭಾವನೆ ಅವರಲ್ಲಿ ಇರುತ್ತದೆ. ಹಾಗೆಯೇ ಭಾರತೀಯ ಸೈನಿಕರೂ ಕೂಡಾ ಪಾಕಿಸ್ತಾನಿ ಸೈನಿಕರನ್ನು ಭಯೋತ್ಪಾದಕರು ಎಂದುಕೊಳ್ಳುತ್ತಾರೆ, ಕಾರಣ ಅವರು ನಮ್ಮನ್ನು ಹಾನಿ ಮಾಡಬಹುದು ಎಂಬ ಕಾರಣಕ್ಕೆ.
ಇಂತಹ ಆಲೋಚನಾ ಕ್ರಮವು ಜಾರಿಯಲ್ಲಿ ಇರುವಾಗ ಹಿಂಸೆ ಎಂಬುದನ್ನು ನಾನು ಹೇಗೆ ಅರ್ಥ ಮಾಡಿಕೊಳ್ಳಬೇಕು ಎಂದೇ ನನಗೆ ಅರ್ಥವಾಗುತ್ತಿಲ್ಲ, ಇದನ್ನು ಸರಿ ತಪ್ಪು ಎಂದು ಅರ್ಥ ಮಾಡಿಕೊಳ್ಳರಲು ನನಗೆ ಬಹಳ ಕಷ್ಟ ಎನಿಸುತ್ತದೆ.

ಪತ್ರಕರ್ತ : ನೀವು ಓದಿದವರಾಗಿರುವುದರಿಂದ ನಿಮ್ಮ ಓದಿನ ಸಂದರ್ಭದಲ್ಲಿ ನಕ್ಸಲ್ ಚಳುವಳಿಯನ್ನು ನೀವು ಗಮನಿಸಿರುತ್ತೀರಿ ಅಲ್ಲವೇ ?

ಸಾಯಿ ಪಲ್ಲವಿ : ಅಲ್ಲ ಸರ್, ನಾವು ಬೆಳೆಯೋ ವಾತಾವರಣ ಎಷ್ಟು ತಟಸ್ಥವಾಗಿತ್ತು ಎನ್ನುವುದು ನನಗೆ ಮುಖ್ಯ. ನಾನು ಈ ಎರಡೂ ಸಿದ್ಧಾಂತಗಳನ್ನು ತಟಸ್ಥವಾಗಿ ನಿಂತು ನೋಡುತ್ತಿದ್ದೇನೆ, ನೀವು ಹೇಳಿದಂತೆ ನಾನೇನಾದರೂ ಎಡ ಅಥವಾ ನೀವು ಹೇಳುವ ಬಲ ಸಿದ್ಧಾಂತದ ಕುಟುಂಬದಲ್ಲಿ ಬೆಳೆದಿದ್ದರೆ, ನಾನು ಯಾರೋ ಒಬ್ಬರ ಪರ ವಹಿಸುವ ಇಲ್ಲವೇ ಅವರಿಗೆ ಅನುಕೂಲಕರವಾಗಿರುವ ಸಾಧ್ಯತೆ ಇತ್ತೇನೋ? ಆದರೆ ನಾನು ಈ ಎರಡೂ ಸಿದ್ಧಾಂತದ ತಿಳುವಳಿಕೆ ಇರುವ ಕುಟುಂಬದಲ್ಲಿ ಬೆಳೆದಿಲ್ಲ. ನಮ್ಮ ಮನೆಯಲ್ಲಿ “ ಮನುಷ್ಯತ್ವ ಇಟ್ಟುಕೊಳ್ಳಬೇಕು, ಯಾರಿಗೂ ಯಾವ ರೀತಿಯಲ್ಲೂ ಹಾನಿ ಮಾಡಬಾರದು, ಯಾರು ತುಳಿತಕ್ಕೆ ಒಳಗಾಗುತ್ತಾರೋ, ಅಂತವರನ್ನು ಅವರು ದೊಡ್ಡವರಾ ಸಣ್ಣವರಾ ಎಂದು ನೋಡದೇ ಅವರ ರಕ್ಷಣೆ, ಮಾಡಬೇಕೆಂದು ಹೇಳಿಕೊಟ್ಟಿದ್ದಾರೆ (The Opressed Should Be protected). ಅಂತವರ ಕುಟುಂಬದ ವಾತಾವರಣದಲ್ಲೇ ನಾನು ಬೆಳೆದಿದ್ದೇನೆ.

ನಾನು ಈ ಎಡ ಮತ್ತು ಬಲ ಸಿದ್ಧಾಂತಗಳ ಬಗ್ಗೆ ಕೇಳಿದ್ದೇನೆ, ಆದರೆ ಅವರಲ್ಲಿ ಯಾರು ಸರಿ ಯಾರು ತಪ್ಪು ಎಂದು ಹೇಳುವುದಕ್ಕೆ ನನಗೆ ಸಾಧ್ಯವಿಲ್ಲ. ಏಕೆಂದರೆ ಇತ್ತೀಚೆಗೆ ಬಿಡುಗಡೆಯಾದ ಕಾಶ್ಮೀರಿ ಫೈಲ್ಸ್ ಎಂಬ ಸಿನಿಮಾದಲ್ಲಿ “ ಆ ಕಾಲದಲ್ಲಿ ಕಾಶ್ಮೀರಿ ಪಂಡಿತರನ್ನು ಹೇಗೆ ಹತ್ಯೆ ಮಾಡಿದ್ದಾರೆ ಎಂಬುದರ ಬಗ್ಗೆ ತೋರಿಸಿದ್ದಾರೆ, ಅಂತೆಯೇ ಇತ್ತೀಚೆಗೂ ಕೂಡಾ ಯಾರೋ ಒಂದಿಷ್ಟು ವಾಹನ ಒಂದರಲ್ಲಿ ಹಸುವನ್ನು ಸಾಗಿಸುತ್ತಿದ್ದು, ಆ ವಾಹನ ಚಾಲಕ ಮುಸ್ಲಿಂ ಎಂಬ ಕಾರಣಕ್ಕೆ ಅವನ ಮೇಲೆ ಹಲ್ಲೆ ಮಾಡಿ ಜೈ ಶ್ರೀರಾಮ್ ಜೈ ಶ್ರೀ ರಾಮ್ ಎಂದು ಹೇಳಿದರು. ಧಾರ್ಮಿಕ ವೈಷಮ್ಯದ ಆಧಾರದಲ್ಲಿ ನೋಡುವುದಾದರೆ ಹಿಂಸೆಯ ವಿಷಯದಲ್ಲಿ ಆಗ ಜರುಗಿದ್ದಕ್ಕೂ ಈಗ ಜರುಗಿದ್ದಕ್ಕೂ ವ್ಯತ್ಯಾಸ ಏನಿದೆ?

ಒಂದು ಧಾರ್ಮಿಕ ವಾತಾವರಣದಲ್ಲಿ ನಾವು ಉತ್ತಮರಾಗಿ ಇರಬೇಕು, ಯಾರ ಮೇಲೂ ಕೆಟ್ಟದಾಗಿ ಒತ್ತಡ ಹೇರಬಾರದು ಎಂದು ಹೇಳುವಾಗಲೂ ಕೂಡಾ ಹಾಗಿದ್ದುಕೊಂಡು ನೀವು ಎಡವೇ ಅಥವಾ ಬಲವೇ ಎಂದು ಕೇಳಿದರೆ “ನೀವು ಮನುಷ್ಯತ್ವ ಇಟ್ಟುಕೊಳ್ಳದೇ ಇದ್ದರೆ ನೀವು ಎಲ್ಲಿದ್ದರೂ ಕೂಡಾ ಅಲ್ಲಿ ನ್ಯಾಯ ಪ್ರಜ್ಞೆ ಇರುವುದಿಲ್ಲ, ಎಂದು ನಾನು ಹೇಳುತ್ತೇನೆ. ನೀವು ಯಾರನ್ನೂ ಹಿಂಸಿಸದ ಮತ್ತು ಯಾರ ಮೇಲೂ ಒತ್ತಡ ಹೇರದ ಮನುಷ್ಯತ್ವ ರೂಪಿಸಿಕೊಂಡರೆ ಆ ವಾತಾವರಣವೂ ತಿಳಿಯಾಗುತ್ತದೆ ಮತ್ತು ನೀವೂ ಸಹ ನಿಮಗೆ ಅರಿವಿಲ್ಲದೇ ಯಾರ ಗೋಜಿಗೂ ಹೋಗದೇ ಉತ್ತಮ ಮನುಷ್ಯರಾಗುತ್ತೀರಿ.