Latest Posts

ಮಕ್ಕಳ ಆತ್ಮಹತ್ಯೆಗೆ ಏನು ಪರಿಹಾರ..?

ಕರ್ನಾಟಕದಲ್ಲಿ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ದೈನಂದಿನ ಹೆಚ್ಚುತ್ತಾ ಇದೆ. ಸಣ್ಣಪುಟ್ಟ ವಿಷಯಗಳಿಗೂ ಕೂಡ ಆತ್ಮಹತ್ಯೆ ಮಾಡಿಕೊಳ್ಳುವ ಮಕ್ಕಳು, ಅವರನ್ನು ಈ ರೀತಿಯ ಜೀವನದ ಮೇಲಿರುವ ಜುಗುಪ್ಸೆಗೆ ಕಾರಣವಾದರೂ ಏನು ಎಂಬುವುದನ್ನು ನಾವು ತಿಳಿಯಬೇಕು. ಪ್ರತಿಯೊಂದು ಮಕ್ಕಳು ಒಂದೊಂದು ರೀತಿಯ ಸಂದರ್ಭ ಕ್ಕನುಗುಣವಾಗಿ ಇರುತ್ತಾರೆ. ಆದರೂ ಯಾಕಾಗಿ ನಮ್ಮ ಮಕ್ಕಳು ಆತ್ಮಹತ್ಯೆ ಮಾಡಿ ಕೊಳ್ಳುತ್ತಾರೆ..? ಅವರು ಏನನ್ನು, ಯಾರನ್ನು ಭಯಪಡುತ್ತಾರೆ..? ಈ ಪ್ರಶ್ನೆಗೆ ಉತ್ತರ ಕಂಡು ಹಿಡಿಯಬೇಕಾದವರು ನೀವೇ. ಆದರೂ ಕೆಲವೊಂದು ವಿಷಯಗಳನ್ನು ದೀರ್ಘವಾಗಿ ಚರ್ಚೆ ಮಾಡಬೇಕಾಗುತ್ತದೆ. ಮಕ್ಕಳ ಮಾನಸಿಕ ವಿಷಯಗಳ ಬಗ್ಗೆ ಬರೆಯಲು ಕುಳಿತರೆ ಅದನ್ನು ಪೂರ್ಣ ಮಾಡುವುದು ಅಸಾಧ್ಯ. ಆದರೂ ಮೇಲಿನ ಎರಡು ಪ್ರಶ್ನೆಗೆ ಮಾತ್ರ ಹೃಸ್ವವಾಗಿ ಉತ್ತರ ಹುಡುಕುವ ಕೆಲಸ ಮಾಡೋಣ.

ಶಾಲೆಗಳು ಮುಚ್ಚಲ್ಪಟ್ಟ ಈ ಸಂದರ್ಭದಲ್ಲಿ ಸಹಪಾಠಿ ಗಳ ಜೊತೆ ಸೇರಲು ಮಕ್ಕಳಿಗೆ ಸಾಧ್ಯವಾಗುವುದಿಲ್ಲ. ಈ ವೇಳೆ ಮಾನಸಿಕ ಒತ್ತಡವು ಹೆಚ್ಚಾಗುವುದು ಸ್ವಾಭಾವಿಕ. ಈ ಸಂದರ್ಭದಲ್ಲಿ ಮಕ್ಕಳ ಮೇಲೆ ಬಹಳ ನಿಗಾ ವಹಿಸುವ ಅಗತ್ಯವಿದೆ. ನಮ್ಮ ಮನೆಯಲ್ಲಿರುವ ಹಿರಿಯ ವ್ಯಕ್ತಿಗಳನ್ನು ಉಪಚರಿಸುವಂತೆ ಮಕ್ಕಳನ್ನು ಉಪಚರಿಸ ಬಾರದು.

ಯಾಕಾಗಿ ನಮ್ಮ ಮಕ್ಕಳು ಆತ್ಮಹತ್ಯೆ ಮಾಡಿ ಕೊಳ್ಳುತ್ತಾರೆ..? ಅವರು ಏನನ್ನು, ಯಾರನ್ನು ಭಯಪಡುತ್ತಾರೆ..?. ಆತ್ಮಹತ್ಯೆ ಎನ್ನುವ ಪದವನ್ನು ತಪ್ಪದೇ ಓದಲು ಕೂಡ ಸಾಧ್ಯವಿಲ್ಲದ ಪ್ರಾಯದಲ್ಲಿ, ಜೀವನವನ್ನು ಕೊನೆಗೊಳಿಸುವ ನಮ್ಮ ಮಕ್ಕಳ ಸಮಸ್ಯೆಗಳೇನು..?

ಯಾರ ಸಮಸ್ಯೆಗಳೂ ಸಣ್ಣದಲ್ಲ. “ಇದೇನು ಲೆಕ್ಕ.. ಇದಕ್ಕಿಂತಲೂ ದೊಡ್ಡದನ್ನು ನಾನು ನಿಭಾಯಿಸಿಲ್ಲವೇ..?” ಎಂದೂ ಹೇಳಲಾಗದು. ಪ್ರತಿಯೊಬ್ಬರು ಅನುಭವಿಸುವ ಮಾನಸಿಕ ಸಂಘರ್ಷಗಳ “ಸಣ್ಣ, ದೊಡ್ಡ” ಎನ್ನುವ ಪ್ರಮಾಣದಲ್ಲಿ ಅಳತೆ ಮಾಡಿ ತಾರತಮ್ಯ ಮಾಡಲು ಸಾಧ್ಯವಿಲ್ಲ. ಕಾರಣ ಬೇರೆಯವರ ಜೀವನ ಮತ್ತು ಅವರು ಅನುಭವಿಸುವ ನೋವು, ‌ಕಷ್ಟಗಳು ಯಾವ ರೀತಿಯ ತೊಂದರೆಗಳಿಂದ ಸಾಗುತ್ತದೆ ಎಂದು ನಮಗೇಗೆ ಗೊತ್ತು ಅಲ್ಲವೇ..? ಆದರೆ ಆತ್ಮಹತ್ಯೆ ಮಾತ್ರ ಇದಕ್ಕಿರುವ ಪರಿಹಾರ ಮಾರ್ಗ ಎನ್ನುವ ಸಂದೇಶವು ನಮ್ಮ ಮಕ್ಕಳಿಗೆ ಹೇಗೆ ದೊರೆಯುತ್ತದೆ..?

ಸರಿಯಾದ “ಪೇರೆಂಟಿಂಗ್” ನ ಕೊರತೆ ಎನ್ನುವುದನ್ನು ಹೇಳಲೇ ಬೇಕು. ದೊಡ್ಡ ಸಮಸ್ಯೆಗಳು ಬಂದಾಗ ಮಕ್ಕಳನ್ನು ತಬ್ಬಿ ಹಿಡಿದು “ನಾವು ಒಟ್ಟಾಗಿ ಸಾಯೋಣ” ಎನ್ನುವ ತಾಯಿಯಂದಿರು ನಮ್ಮಲ್ಲಿದ್ದಾರೆ. ಮತ್ತು “ಹೀಗಾದರೆ ನಾನು ಸಾಯುತ್ತೇನೆ” ಎಂದು ಮಕ್ಕಳ ಮುಂದೆ ಹೇಳುವಾಗ ಮುಗ್ಧ ಮನಸ್ಸಿನ ಆಳದಲ್ಲಿ ಸಾವೆಂದರೆ ಆಟದ ವಸ್ತುವೆನ್ನುವ ರೀತಿಯಲ್ಲಿ ಮುದ್ರೆ ಒತ್ತುತ್ತದೆ. “ನಾವು ಜೀವಿಸೋಣ, ಜೀವಿಸಿ ತೋರಿಸೋಣ” ಎಂದು ಹೇಳಿ ಕೊಡುವಾಗ ಸಿಗುವ ಸ್ಥೈರ್ಯ, ಧೈರ್ಯ, ಮನೋದಾರ್ಡ್ಯತೆ ಮಕ್ಕಳಲ್ಲಿ ಜೀವನದ ಬಗ್ಗೆ ಹೊಸದೊಂದು ಹುರುಪಿನ ಹುಮ್ಮಸ್ಸನ್ನು ಹುಟ್ಟಿಸುತ್ತದೆ‌.

“ನೆರೆಮನೆಯ ಹುಡುಗನಿಗಿಂತ ಮಾರ್ಕ್ ಕಡಿಮೆಯಾದರೆ ಮನೆಯ ಮೆಟ್ಟಿಲು ಹತ್ತಬಾರದು” ಎಂದು ಭಯಪಡಿಸಿ, ಬೆದರಿಕೆಯೊಡ್ಡುವ ಪೋಷಕರು, ಮಕ್ಕಳು ಆತ್ಮಹತ್ಯೆ ಮಾಡಿದರೆ ಕಡಿಮೆ ಮಾರ್ಕ್ ನೀಡಿದ ಅಧ್ಯಾಪಕರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಪ್ರಕ್ರಿಯೆಗಳು ಹೇರಳವಾಗಿ ನಡೆಯುತ್ತದೆ. ಅಧ್ಯಾಪಕರನ್ನು ಶತ್ರುಗಳಂತೆ ಮಾತ್ರ ಕಾಣುವ ಮತ್ತು ಯಾವುದೇ ರೀತಿಯ ಗೌರವಾದರಗಳಿಲ್ಲದೇ ಮೃಗೀಯವಾಗಿ ವರ್ತಿಸುವ ಬಹುತೇಕ ಮಕ್ಕಳಿಗೆ ಮನೆಯಲ್ಲಿ ಸಿಗಬೇಕಾದ ಸರಿಯಾದ ಮಾರ್ಗದರ್ಶನದ ಕೊರತೆ ಎಂಬುವುದನ್ನು ಅಧ್ಯಯನದಲ್ಲಿ ಹೇಳುತ್ತದೆ.

ಖಂಡಿತವಾಗಿಯೂ ಶಿಕ್ಷಣ ಮತ್ತು ಶಿಕ್ಷೆಯ ಅನಿವಾರ್ಯತೆ ಮಕ್ಕಳಿಗೆ ಬೇಕು. ಶಿಕ್ಷಿಸಬೇಕಾದುದು ಸೋಲುವಾಗಲ್ಲ. ಕಾರಣ ಸೋಲು ಎನ್ಮುವುದು ಒಂದು ತಪ್ಪಲ್ಲ. ತಿದ್ದುವುದು ಕೂಡ ಒಂದು ಸೋಲಲ್ಲ. ಇದೆಲ್ಲವನ್ನು ಮಕ್ಕಳಿಗೆ ಯಾರು ಹೇಳಿಕೊಡಬೇಕು..?

ಲಾಕ್ ಡೌನ್ ಸಮಯದಲ್ಲಿ ಬೈಕ್ ತೆಗೆದು ಹೊರಗೆ ಹೋಗಬಾರದೆಂದು ಹೇಳಿದಕ್ಕೆ ಆತ್ಮಹತ್ಯೆ..!
ಆನ್‌ಲೈನ್ ಕ್ಲಾಸ್ ಆರಂಭವಾದ ಆ ದಿನ ಟ,ವಿ ನೋಡಲು ಆಗುವುದಿಲ್ಲ ಎನ್ನುವುದಕ್ಕೆ ಮನನೊಂದು ಪ್ರತಿಭಾವಂತೆ ವಿಧ್ಯಾರ್ಥಿನಿ ಆತ್ಮಹತ್ಯೆ..!
ಜೀವನ ಸಾಕು, ಗುಡ್ ಬೈ ಎಂದು ಬರೆದು ಹತ್ತನೇ ತರಗತಿ ವಿಧ್ಯಾರ್ಥಿ ಆತ್ಮಹತ್ಯೆ..!
ಒಂದು ವಾರದಿಂದೀಚೆಗೆ ಮಾನಸಿಕ ಅಸ್ವಸ್ಥತೆಯಿಂದ ಇದ್ದ ವಿಧ್ಯಾರ್ಥಿ ಆತ್ಮಹತ್ಯೆ..!
ಕಾರಣ ತಿಳಿದು ಬಂದಿಲ್ಲ. ಆರನೇ ತರಗತಿ ವಿಧ್ಯಾರ್ಥಿ ಆತ್ಮಹತ್ಯೆ..!

ಜೀವನದಲ್ಲಿ ಒಂದು ಬಾರಿಯೂ ಸೋಲ ಬಾರದೆಂದು ಈ ತಲೆಮಾರಿಗೆ ಕಲಿಸಿದವರು ಯಾರು..?”

ನಮ್ಮ ಮಕ್ಕಳು ಸೋಲಲು ಕಲಿಯಲಿ.‌ ಸಮಸ್ಯೆಗಳು ಎದುರಾದರೆ ಅದನ್ನು ನಿಭಾಯಿಸಲು, ಕಷ್ಟಗಳು ಬಂದರೆ ಅದನ್ನು ಎದುರಿಸಲು, ತೊಂದರೆಗಳು ಬಂದರೆ ಅದನ್ನು ಸಮರ್ಥವಾಗಿ ನಿರ್ವಹಿಸಲು ನಮ್ಮ ಮಕ್ಕಳು ಕಲಿಯಲಿ. ತಪ್ಪುಗಳನ್ನು ತಿದ್ದಿ ಜೀವಿಸಲು ಕಲಿಯಲಿ. ಜೀವನ ಎಂದರೆ ಅಸ್ವಾದನೆಗಿರುವ ಸ್ವರ್ಗ ಸುಖವೆಂದು ನೀವು ಅವರಿಗೆ ಕಲಿಸಬೇಡಿ. ಸೋತರೆ ಧೈರ್ಯ ತುಂಬಿರಿ. ಅನಗತ್ಯವಾದ ಧುರಬಿಮಾನ ಮತ್ತು ತಿರಸ್ಕೃತ ಭಾವನೆಗಳನ್ನು ಅವರಿಗೆ ಎಂದೂ ಹೇಳಿ ಕೊಡಬೇಡಿ. “ಇದೊಂದು ದೊಡ್ಡ ವಿಷಯವೇನಲ್ಲ. ಎಲ್ಲವೂ ಸರಿಯಾಗಬಹುದು” ಎನ್ನುವ ರೀತಿಯಲ್ಲಿರುವ ಸಂದರ್ಭದ ಕ್ಕನುಸಾರ ಆಶ್ವಾಸನೆ ನಿರಂತರವಾಗಿ ನೀಡುತ್ತಾ ಇರಬೇಕು.

ಯಾಕಾಗಿ ನಮಗೆ counselling ಕೇಂದ್ರಗಳು..? ಒಂದು ಕೌನ್ಸಿಲರನ್ನು ಕಾಣಲು ಹಿಂದೇಟು ಹಾಕುವ ಪೋಷಕರೊಂದಿಗೆ ಒಂದು ಮಾತು. ಜ್ವರ, ಶೀತ, ತಲೆನೋವಿಗೂ ಸ್ಪೆಷಾಲಿಟಿ ಆಸ್ಪತ್ರೆಗಳ ದೊಡ್ಡ ದೊಡ್ಡ ವೈಧ್ಯರನ್ನು ಬೇಟಿ ಮಾಡುವ ನೀವು ಯಾಕಾಗಿ ಮಕ್ಕಳ ನಾಳಿನ ಜೀವನವನ್ನು ನೆನೆಸಿ ಒಂದು ನುರಿತ ಕೌನ್ಸಿಲರನ್ನು ಬೇಟಿ ಮಾಡುವುದಿಲ್ಲ..? ಎಷ್ಟು ಜನ ಪೋಷಕರು ಮಕ್ಕಳನ್ನು ಒಂದು ಮಾನಸಿಕ ತಜ್ಞರನ್ನು ಬೇಟಿ ಮಾಡಿ ಕಾರ್ಯ ಹೇಳಿದ್ದೀರಿ..?

ಬಹುತೇಕವಾಗಿ ಕೌನ್ಸಿಲರ್ ಗಳು ಪಡೆಯುವ ಅಧಿಕ ಪ್ರಮಾಣದ ಬೆಲೆಯು ನಿಮ್ಮನ್ನು ಬೇಟಿಯಾಗದಂತೆ ತಡೆಯಬಹುದು ಅಲ್ಲವೇ..? ಹಾಗಾದರೆ ಮಕ್ಕಳಿಗಾಗಿ ಒಂದೊಂದು ಶಾಲಾ ಕಾಲೇಜ್ ಗಳಿಗೆ ನೀವು ವ್ಯಯಿಸುವ ಖರ್ಚೆಷ್ಟು..? ಇತರರ ಮೇಲೆ ಪೈಪೋಟಿ ನಡೆಸಿ ಸಾರ್ವ ಸುಖ, ಸಂಪನ್ನವಾದ ಶೈಕ್ಷಣಿಕ ಸಂಸ್ಥೆಗಳನ್ನು ಆಯ್ಕೆ ಮಾಡುವ ನೀವು ಮಕ್ಕಳ ಮಾನಸಿಕ ಆರೋಗ್ಯದ ದೃಷ್ಟಿಯಲ್ಲಿ ಅವರ ಜೀವನ ಸುಧಾರಣೆಗಾಗಿ ಮಾಡುವುದು ಕೇವಲ ಶೂನ್ಯ ಮಾತ್ರ.

ಲೇ.. ಶಹನಾಝ್ ಶಾಝ್ (ಶಾನಿಶ) ಬೆಂಗಳೂರು.