Latest Posts

ರಾಮಮಂದಿರ ಭೂ ಹಗರಣ : ಬದಲಾವಣೆಗೆ ಪ್ರೇರಣೆಯಾಗಲಿ -ಉನೈಸ್ ಹುಂಡಿ (ಕೊಡಗು)

ಬಾಬರಿ ಭೂಮಿಯಲ್ಲಿ ರಾಮಮಂದಿರ ನಿರ್ಮಾಣ ಪ್ರವೃತ್ತಿ ಆರಂಭಗೊಂಡಾಗಲೇ ಮಂದಿರದ ಭೂಮಿ ವ್ಯವಹಾರದಲ್ಲಿ ಹಗರಣದ ಆರೋಪ ಕೇಳಿ ಬಂದಿರುತ್ತದೆ. ಎರಡು ಕೋಟಿ ರೂಪಾಯಿಗಳಿಗೆ ಎರಡು ವ್ಯಕ್ತಿಗಳು ಖರೀದಿಸಿರುವ 12,080 ಚದರ ಮೀಟರ್ ಭೂಮಿಯನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟ್ ಕೇವಲ ಐದು ನಿಮಿಷದಲ್ಲಿ 18.5 ಕೋಟಿಗೆ ಖರೀದಿ ಮಾಡಿರುವುದರಿಂದಾಗಿದೆ ಹಗರಣದ ಸುಳಿವು ಹೊರಬಂದಿರುವುದು. ಸಮಯ 7.10ಕ್ಕೆ ಮೊದಲ ವ್ಯವಹಾರ 7.15ಕ್ಕೆ ಎರಡನೇ ವ್ಯವಹಾರ ನಡೆದಿದೆ. ಮೊದಲ ವ್ಯವಹಾರಕ್ಕಾಗಿ ಸ್ಟ್ಯಾಂಪ್ ಪೇಪರ್ ಖರೀದಿಸಿರುವುದು 5.11ಕ್ಕೆ ಎರಡನೇ ವ್ಯವಹಾರಕ್ಕಾಗಿ ಸ್ಟ್ಯಾಂಪ್ ಪೇಪರ್ ಖರೀದಿಸಿರುವುದು 5.22ಕ್ಕೆ. ಮೊದಲ ವ್ಯವಹಾರಕ್ಕೆ ಸಾಕ್ಷಿಯಾದವರಲ್ಲಿ ಒಬ್ಬರು ಮಂದಿರದ ಟ್ರಸ್ಟ್ ಸದಸ್ಯ ಹಾಗೂ ಎರಡನೇ ವ್ಯವಹಾರದ ಸಾಕ್ಷಿ ಅಯೋಧ್ಯೆ ಮೇಯರ್. ಈ ಚೌಕಾಶಿ ವ್ಯಾಪಾರದಲ್ಲಿ ಭಾಗಿಯಾದವರು ಭಕ್ತರ ನಂಬಿಕೆಗೆ ಮೋಸ ಬಗೆದು ಕೋಟ್ಯಾಂತರ ರೂಪಾಯಿ ವಸೂಲಿ ಮಾಡಿದ್ದಾರೆ.

ಮಂದಿರ ನಿರ್ಮಾಣಕ್ಕಾಗಿ ದೇಶದ ನಾನಾ ಕಡೆಗಳಿಂದ ಸಾವಿರಾರು ಕೋಟಿಗಳ ಹಣ ಸಂಗ್ರಹ ಮಾಡಲಾಗಿತ್ತು. ಕರ್ನಾಟಕದಿಂದಲೂ ಕೋಟಿಗಟ್ಟಲೆ ಹಣವನ್ನು ಸಂಘಪರಿವಾರ ಸಂಗ್ರಹಿಸಿದ್ದಾರೆ. ಗುಜರಾತಿನ ಹಲವು ವಜ್ರವ್ಯಾಪಾರಿಗಳು ಕೋಟ್ಯಾಂತರ ರೂಪಾಯಿ ದೇಣಿಗೆ ನೀಡಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ 5 ಲಕ್ಷ ರೂಪಾಯಿ ನೀಡುವ ಮೂಲಕ ಹಣಸಂಗ್ರಹಕ್ಕೆ ಚಾಲನೆ ನೀಡಿದ್ದರು. ಜನವರಿ 15ರಿಂದ ಫೆಬ್ರವರಿ 27ರ ವರೆಗೆ ಮಂದಿರ ನಿರ್ಮಾಣ ಟ್ರಸ್ಟಿನ ಮೇಲ್ನೋಟದಲ್ಲಿ ನಡೆದ ಹಣಸಂಗ್ರಹದಲ್ಲಿ ಫೈಝಾಬಾದಿನ ಮುಸ್ಲಿಂ ಜನಾಂಗದವರಿಂದಲೂ ಸಹ ದೇಣಿಗೆ ಪಡೆದುಕೊಂಡಿದ್ದರು.

ಭೂಮಿ ವ್ಯವಹಾರದ ಭ್ರಷ್ಟಾಚಾರ ಹೊರಬಂದ ಹಿನ್ನೆಲೆಯಲ್ಲಿ ಕೋಟ್ಯಾಂತರ ರೂಪಾಯಿಗಳ ದೇಣಿಗೆ ಸಂಬಂಧಿಸಿ ಸಹ ವಿಸ್ತಾರವಾದ ಆಡಿಟ್ ನಡೆಸಬೇಕಾಗಿದೆ. ಶ್ರೀ ರಾಮನ ಹೆಸರಿನಲ್ಲಿರುವ ಹಣ ಯಾರು ಸಹ ದುರ್ಬಳಕೆ ಮಾಡುವುದಿಲ್ಲ ಎಂಬ ನಂಬಿಕೆಯಿಂದಾಗಿದೆ ಭಕ್ತ ವಿಶ್ವಾಸಿಗಳು, ಸಂಘಟನೆಗಳು ಎಲ್ಲವನ್ನೂ ಮರೆತು ದೇಣಿಗೆ ನೀಡಿರುವುದು. ಈ ಸಂಗ್ರಹಿಸಲಾದ ಕೋಟಿಗಟ್ಟಲೆ ಹಣದಿಂದ ತಕ್ಷಣ ಮಂದಿರ ನಿರ್ಮಾಣ ಪೂರ್ಣಗೊಂಡರೆ ಮುಂದಕ್ಕೆ ಹಿಂದುತ್ವ ರಾಜಕೀಯ ಹೇಳಿ ತಮ್ಮ ಅಧಿಕಾರ ಉಳಿಸಲು ಸಾಧ್ಯವಾಗುವುದಿಲ್ಲ ಎಂದು ಅರಿತುಕೊಂಡಾಗಿರಬೇಕು ಹಣ ವಸೂಲಿ ಮಾಡುವುದಕ್ಕೆ ಮುಂದಾಗಿರುವುದು.

ಮಂದಿರ ನಿರ್ಮಾಣಕ್ಕಾಗಿ ಸಂಗ್ರಹಿಸಲಾದ ಹಣ ದುರುಪಯೋಗ ಮಾಡುವುದು ದುಷ್ಕರ್ಮವಾಗಿದೆ ಹಾಗೂ ಇದು ಜನರ ನಂಬಿಕೆಗೆ ಅವಮಾನ ಮಾಡುವಂತಾಗಿದೆ ಎಂದು ಈಗಾಗಲೇ ಎಐಸಿಸಿ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ. ದಿನನಿತ್ಯ ದುಡಿದು ಸಿಗುವ ಉಳಿತಾಯದಿಂದ ಮಂದಿರ ನಿರ್ಮಾಣಕ್ಕಾಗಿ ದೇಣಿಗೆ ನೀಡಿರುವ ವಿಶ್ವಾಸಿಗಳಿಗೆ ಈ ಅವ್ಯವಹಾರ ಕೇಳಿ ಅತಿಯಾದ ನೋವಾಗಿರುತ್ತದೆ. ಅಧಿಕಾರ ಹಿಡಿಯಲು, ಅಧಿಕಾರ ಉಳಿಸಲು ಮಾತ್ರ ರಾಮ ಮಂದಿರವನ್ನು ಒಂದು ಉಪಕರಣವಾಗಿ ಕಾಣುವ ಸಂಘಪರಿವಾರಕ್ಕೆ ಯಾವುದೇ ರೀತಿಯ ಮನೋವೇದನೆ ಉಂಟಾಗುವುದಿಲ್ಲ. ಇಲ್ಲದಿದ್ದರೆ ಎರಡು ಕೋಟಿ ಕೆಲವೇ ನಿಮಿಷದಲ್ಲಿ 18ಕೋಟಿಯಾಗಿ ವಿಕಾಸಗೊಳ್ಳುವುದು ಟ್ರಸ್ಟ್ ಸದಸ್ಯರಿಗೆ ಮಾತ್ರ ಕರಗತವಾಗಿರುವ ಅತ್ಯಾಪೂರ್ವವಾದ ಅದ್ಭುತ ಸಿದ್ಧಿಯಾಗಿರಬೇಕು.

ಪ್ರಧಾನಮಂತ್ರಿ ನರೇಂದ್ರ ಮೋದಿ 15 ಸದಸ್ಯರನ್ನೊಳಗೊಂಡ ಶ್ರೀ ರಾಮ ಜನ್ಮಭೂಮಿ ತೀರ್ಥ ಟ್ರಸ್ಟ್ ರೂಪೀಕರಿಸಿದ್ದು 2020 ಫೆಬ್ರವರಿ ತಿಂಗಳಲ್ಲಾಗಿತ್ತು . 70 ಎಕರೆ ಭೂಮಿಯನ್ನು ಮಂದಿರ ನಿರ್ಮಾಣಕ್ಕಾಗಿ ಒದಗಿಸಿದರು. ಆದರೆ ಈ ಮೋಸಗಾರಿಕೆಯಲ್ಲಿ ಭಾಗಿಯಾಗಿರುವುದು ಟ್ರಸ್ಟಿನ ಸದಸ್ಯರೇ ಆಗಿರುವಾಗ ಶ್ರೀ ರಾಮನ ಹೆಸರಿನಲ್ಲಿ ನಿರ್ಮಿಸಲಿರುವ ಮಂದಿರದ ವಿಚಾರದಲ್ಲಿ ಅವರಿಗೆ ಎಷ್ಟೊಂದು ಪ್ರಾಮಾಣಿಕತೆ ಇರಬಹುದು ಎಂಬುದು ಎಲ್ಲರಿಗೂ ಮನವರಿಕೆ ಮಾಡಿಕೊಳ್ಳಲು ಸಾಧ್ಯ. ಟ್ರಸ್ಟಿನ ಕುರಿತು, ಟ್ರಸ್ಟ್ ಸದಸ್ಯರ ಕುರಿತು ಪೂರ್ಣವಾಗಿ ಅರ್ಥೈಸಿಕೊಂಡಾಗಿರಬೇಕಲ್ಲವೇ ಮಂದಿರ ನಿರ್ಮಾಣದ ಜವಾಬ್ದಾರಿ ಪ್ರಧಾನಿ ಇವರಿಗೆ ವಹಿಸಿ ಕೊಟ್ಟಿರುವುದು. ಆ ನಿಟ್ಟಿನಲ್ಲಿ ಈ ಅವ್ಯವಹಾರ ಆರೋಪದ ಸತ್ಯಾಸತ್ಯತೆಯನ್ನು ಹೊರತರಬೇಕಾದ ಜವಾಬ್ದಾರಿ ಪ್ರಧಾನಮಂತ್ರಿಗೆ ಆಗಿರುತ್ತದೆ.

ಉತ್ತರ ಪ್ರದೇಶದಿಂದ ಪ್ರಾರಂಭಿಸಿ ದೇಶದಾದ್ಯಂತ ಶ್ರೀ ರಾಮ ಜನ್ಮಭೂಮಿ ಹಾಗೂ ರಾಮ ಮಂದಿರ ವಿಚಾರವನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಿಜೆಪಿ ಬಳಸಿಕೊಂಡು ಬಂದ ತಂತ್ರವಾಗಿದೆ. ಕೊನೆಗೆ ಮಂದಿರ ನಿರ್ಮಾಣದ ಹಗರಣ ಆರೋಪ‌ ಅವರಿಗೆ ತಿರುಗೇಟಾಗಿ ಪರಿಣಮಿಸಲಿದೆ. ದೇವತೆಗಳ ಹೆಸರಿನಲ್ಲಿ ಭಕ್ತರನ್ನು ವಂಚಿಸುವ ನೀಚ ರಾಜಕೀಯದ ಅಂತ್ಯ ಉತ್ತರ ಪ್ರದೇಶದಿಂದ ಪ್ರಾರಂಭವಾಗಲಿದೆಯೇ ಎಂಬುದು ಕಾದು ನೋಡಬೇಕಾಗಿದೆ.

ಸಂಘಪರಿವಾರ ಎತ್ತಿಹಿಡಿಯುವ ಶ್ರೀ ರಾಮಭಕ್ತಿ ಕೇವಲ ನಾಟಕ ಮಾತ್ರ ಎಂಬುದು ಈಗ ಹೊರಬಂದಿರುವ ಮಂದಿರ ನಿರ್ಮಾಣ ಹಗರಣದಿಂದ ಜನರಿಗೆ ಅರ್ಥವಾದರೆ, ಮುಂದಿನ ವರ್ಷ ಆರಂಭದಲ್ಲಿ ವಿಧಾನಸಭಾ ಚುನಾವಣೆ ನಡಯಲಿರುವ ಉತ್ತರ ಪ್ರದೇಶದಲ್ಲಿ ಇವರ ನಕಲಿ ಶ್ರೀ ರಾಮಭಕ್ತಿಗೆ ಪ್ರಾಮುಖ್ಯತೆ ಲಭ್ಯವಾಗಬೇಕೆಂದಿಲ್ಲ. ಮಂದಿರ ನಿರ್ಮಾಣ ಹಗರಣ ಹೊರತಂದ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷಕ್ಕೆ ಅದನ್ನು ಜನರ ಮುಂದೆ ಸ್ಪಷ್ಟವಾಗಿ ತಿಳಿಯಪಡಿಸಲು ಸಾಧ್ಯವಾದರೆ ಸಂಘಪರಿವಾರದ ಮತೀಯ ರಾಜಕೀಯ ಅಜೆಂಡಾದ ಅಂತ್ಯದ ಆರಂಭ ಉತ್ತರ ಪ್ರದೇಶದಿಂದಲೇ ಕಾಣಬಹುದು.

ಮಂದಿರ ನಿರ್ಮಾಣಕ್ಕಾಗಿರುವ ಭೂಮಿಯ ಸಮೀಪದಲ್ಲಿರುವ ಭೂಮಿಯ ಬೆಲೆ ಎರಡು ಕೋಟಿಯಿಂದ ಕೆಲವೇ ನಿಮಿಷದಲ್ಲಿ 18.5 ಕೋಟಿಯಾಗಿ ಹೆಚ್ಚಳವಾಗಿರುವುದರ ಪವಾಡವೇನು ಎಂಬುದು ಹೊರಬರಬೇಕಾಗಿದೆ. ಎರಡು ವ್ಯವಹಾರದಲ್ಲಿ ಕೂಡ ಸಹಿ ಹಾಕಿರುವುದು ಒಂದೇ ಸಾಕ್ಷಿಗಳಾಗಿದ್ದಾರೆ. ಎರಡು ಹಣದ ವ್ಯವಹಾರಗಳು ನಡೆದಿರುವುದು ರಾಮಮಂದಿರ ಟ್ರಸ್ಟ್ ಪ್ರ. ಕಾರ್ಯದರ್ಶಿ ಚಂಪಥ್ ರಾಯಿಯ ಹೆಸರಿನಲ್ಲಾಗಿರುವುದರಿಂದ ಇದರ ಹಿಂದೆ ನಡೆದ ದಂಧೆ ಹೊರತರಲು ಹೆಚ್ಚು ಸಾಹಸಪಡಬೇಕಾದ ಅಗತ್ಯವಿರುವುದಿಲ್ಲ. ಇದೇ ರೀತಿ ಈ ಹಿಂದೆಯೂ ಶ್ರೀ ರಾಮನ ಹೆಸರಿನಲ್ಲಿ ಟ್ರಸ್ಟ್ ಸಾರಥಿಗಳು ಕೋಟ್ಯಾಂತರ ರೂಪಾಯಿಗಳ ದಂಧೆ ನಡೆಸಿರಲು ಸಾಧ್ಯತೆಗಳಿವೆ. ಸಿಎಜಿ ಪರಿಶೀಲನೆ ಮೂಲಕ, ಸಿಬಿಐ ತನಿಖೆ ಮೂಲಕ ಮಾತ್ರ ರಾಮ ಮಂದಿರ ನಿರ್ಮಾಣದ ಹಿಂದಿನ ಹಗರಣದ ಹೊರತರಲು ಸಾಧ್ಯ. ಬಿಜೆಪಿ ಹಾಗೂ ಕೇಂದ್ರ ಸರ್ಕಾರ ಈ ಆರೋಪದ ನೈಜತೆ ಹೊರತರಬೇಕೆಂದು ಪ್ರಾಮಾಣಿಕವಾಗಿ ಆಗ್ರಹಿಸುವುದಾದರೆ ನ್ಯಾಯಾಂಗ ತನಿಖೆಗೆ ಆದೇಶ ನೀಡಬೇಕಾಗಿದೆ.

ಹಿಂದೂ ಸಮುದಾಯದ ನಂಬಿಕೆಯನ್ನು ಶೋಷಣೆ ನಡೆಸಿ ಮತ ರಾಜಕೀಯಕ್ಕಾಗಿ ಬಳಸಿಕೊಳ್ಳುವ ಸಂಘಪರಿವಾರಕ್ಕೆ ಶ್ರೀ ರಾಮನೊಂದಿಗೋ ಶ್ರೀ ಕೃಷ್ಣನೊಂದಿಗೋ ಅಧ್ಯಾತ್ಮಿಕತೆಯ ದಿವ್ಯಾನುಭೂತಿ ಎಳ್ಳಷ್ಟೂ ಇಲ್ಲವೆಂಬುದು ಮತ್ತೊಮ್ಮೆ ಮಂದಿರ ನಿರ್ಮಾಣ ಹಗರಣದಿಂದ ಬಯಲಾಗುತ್ತಿದೆ. ಉತ್ತರ ಭಾರತದಲ್ಲಿ ಬಳಸಿದ ಈ ಕುತಂತ್ರ ದಕ್ಷಿಣ ಭಾರತದಲ್ಲಿ ಸಂಘಪರಿವಾರ ಶಬರಿಮಲೆ ವಿಚಾರವನ್ನು ಮುಂದಿಟ್ಟುಕೊಂಡು ಎತ್ತಿ ತರಲು ಕಠಿಣ ಪ್ರಯತ್ನಪಟ್ಟರೂ ಕೇರಳ ಜನತೆ ಪ್ರಬುದ್ಧತೆ ಮೆರೆದು ಬಿಜೆಪಿಯನ್ನು ಚಿಗುರಿನಲ್ಲೇ ಚಿವುಟಿರುವುದರ ನಿದರ್ಶನವೇ ಈಗಾಗಲೇ ನಡೆದ ಕೇರಳ ವಿಧಾನಸಭಾ ಚುನಾವಣೆಯ ಫಲಿತಾಂಶ. ಬಿಜೆಪಿಗೆ ಒಂದೇ ಒಂದು ಸೀಟು ಸಹ ನೀಡದೆ ಕೇರಳ ಜನತೆ ತೋರಿದ ಪ್ರಬುದ್ಧತೆ ಕನಿಷ್ಟ ಪಕ್ಷ ಉತ್ತರ ಪ್ರದೇಶದ ಹಿಂದೂ ಸಹೋದರರು ಸಭಾ ಮಂದಿರ ನಿರ್ಮಾಣ ಹಗರಣದ ಹಿನ್ನೆಲೆಯಲ್ಲಿ ತೋರುವುದಾದರೆ ಭಕ್ತವಿಶ್ವಾಸಿಗಳ ನಂಬಿಕೆಯನ್ನು ಶೋಷಣೆ ನಡೆಸಿ ಲಾಭ ಪಡೆಯುವ ಸಂಘಪರಿವಾರದ ರಾಜಕೀಯ ಕೊನೆಗಾಣಬಹುದು. ರಾಮಮಂದಿರ ನಿರ್ಮಾಣ ಹಗರಣ ತಿಳುವಳಿಕೆಗೆ ಹಾಗೂ ಬದಲಾವಣೆಗೆ ಪ್ರೇರಣೆಯಾಗಲಿ.