Latest Posts

ಸ್ಪೆಷಲ್‌ : ಕ್ಯಾರೆಟ್‌ ಹಲ್ವಾ!

 ಗಂಡ ಎನಿಸಿಕೊಂಡವನು ಅಂಗಡಿಯಿಂದ ತಂದರೂ ತರಬಹುದಾದ ಸ್ವೀಟ್‌ ಬಾಕ್ಸ್‌ಗೆ ಕಾಯದೆ, ನೀವೇ ಒಳ್ಳೆ ಕ್ಯಾರೆಟ್‌ ಹಲ್ವಾ ಮಾಡಿಬಿಡಿ!

ಹಸಿ ಕ್ಯಾರೆಟ್ಟು ಆರೋಗ್ಯಕ್ಕೆ ಎಷ್ಟು ಒಳ್ಳೆಯದೋ ಬೇಯಿಸಿದ್ದು ಅಷ್ಟೇನೂ ಒಳ್ಳೇದಲ್ಲ. ಹಾಗೆ ಮಾಡಿದಾಗ ಸಾಕಷ್ಟು ಕ್ಯಾಲರಿ ಶಕ್ತಿ ಕಳಕೊಂಡಿರುತ್ತೆ ಎಂಬಿತ್ಯಾದಿ ಆರೋಗ್ಯಕರ ಸಲಹೆಗಳ ನಡುವೆಯೂ ಆಗಾಗ ಬಾಯಿರುಚಿ ಬೇಕಲ್ಲವೇ? ಕೊಬ್ಬು ಸದಾ ತಿನ್ನೋದು ಒಳ್ಳೇದಲ್ಲ, ಸಿಹಿ ಹೆಚ್ಚು ತಿಂದರೆ ಮೈಬರುತ್ತೆ …ಈ ಎಚ್ಚರಿಕೆಗಳನ್ನು ಗಮನದಲ್ಲಿಟ್ಟುಕೊಂಡು ಹಿತಿಮಿತವಾಗಿ ಸಿಹಿತಿಂಡಿಗಳನ್ನು ಮಾಡಿರಿ. ಎನ್‌ಜಾಯ್‌ ಮಾಡಿರಿ. ಹಲ್ವಾ ಹೆಸರೇ ಬಾಯಲ್ಲಿ ನೀರೂರಿಸುವಾಗ, ಇನ್ನು ಅದನ್ನು ಮಾಡಿದೊಡನೆ ಹೋಗ್ತಾ ಬರ್ತಾ ತಿನ್ನುವ ಮಕ್ಕಳು. ಬಂದುಹೋಗುವವರಿಗೆ ಕೊಟ್ಟು ತಿನ್ನುವ ಸಂಭ್ರಮ ಇನ್ನೂ ಹೆಚ್ಚು… ಮಹಿಳಾ ದಿನಾಚರಣೆ ಪ್ರಯುಕ್ತ ಇವತ್ತು ನಮ್ಮ ಮಹಿಳಾಮಣಿಗಳು ಮನೆಯಲ್ಲಿ ಏನೇನು ಸಿಹಿತಿಂಡಿಗಳನ್ನು ಮಾಡುತ್ತಿದ್ದಾರೋ ಏನೋ. ನಾವು ದಟ್ಸ್‌ಕನ್ನಡದಲ್ಲಿ ಕ್ಯಾರೆಟ್‌ ಹಲ್ವಾ ಮಾಡ್ತೀವಿ! ಬೇಕಾಗುವ ಪದಾರ್ಥಗಳು : 3 ಲೋಟ ತಾಜಾ ಹಾಲು ಸುಮಾರಾದ ಸೈಜಿನ 7 ಕೆಂಪಾಕೆಂಪನೆ ಕ್ಯಾರೆಟ್ಟುಗಳು ಒಂದೂವರೆ ಲೋಟ ಸಕ್ಕರೆ ಒಂದೆರಡು ಚೂರು ಕಲ್ಲು ಸಕ್ಕರೆ 3 ರಿಂದ ನಾಲ್ಕು ಟೀ ಚಮಚೆವರೆಗೆ ತುಪ್ಪ ಮೂರು ಅಥವಾ ನಾಲ್ಕು ಏಲಕ್ಕಿ ಕೈಲಾದಷ್ಟು ಬಾದಾಮಿ, ಗೋಡಂಬಿ, ದ್ರಾಕ್ಷಿ ಮಾಡುವ ವಿಧಾನ : ಕೋಸಂಬರಿ ಮಾಡೋಕೆ ಸದಾ ಚೌಕಾಶಿ ಮಾಡಿ ತರುತ್ತೀರಲ್ಲ ಕ್ಯಾರೆಟ್ಟು ಅದು ಮಾಸಲು ಕೆಂಪು ಬಣ್ಣದ್ದಿದ್ದರೂ ನಡೆದೀತು. ಆದರೆ ಹಲ್ವಾ ಮಾಡಬೇಕಾದರೆ ಕೆಂಪುಗಟ್ಟಿದ ಕ್ಯಾರೆಟ್ಟುಗಳನ್ನೇ ತರಬೇಕು. ತುರಿಯೋ ಮಣೆಯಿಂದಲೋ, ಹೋಂ ಕಿಚನ್‌ ಸೆಟ್‌ (ಅಂಜಲಿ) ನೆರವಿನಿಂದಲೋ ಕ್ಯಾರೆಟ್‌ ತುರಿಯಿರಿ. ನಾನ್‌ಸ್ಟಿಕ್‌ ಅಥವಾ ಸ್ಟೇನ್‌ಲೆಸ್‌ ಸ್ಟೀಲ್‌ ಬಾಣಲೆಯಲ್ಲಿ ಹದವಾಗಿ ಬಾಡಿಸಿ. ತಾಮ್ರತಳದ ಬಾಣಲೆಯಾದರೆ ಹುಷಾರು, ಸೀದುಹೋದೀತು. ಆರಾಮವಾಗಿ ಬಾಡಿಸಿದ ಕ್ಯಾರೆಟ್‌ ತುರಿಯನ್ನು ತುಪ್ಪ ಹಾಕಿದ ಬಾಣಲೆಯಲ್ಲಿ ಹುರಿಯಿರಿ. ಫೋನ್‌ ಬಂತು ಅಂತಲೋ, ಇಮೇಲ್‌ ಚೆಕ್‌ ಮಾಡುವುದಕ್ಕೋ.. ನೆಚ್ಚಿನ ಧಾರಾವಾಹಿ ಇಣುಕಲೆಂದೋ ಕದಲದಿರಿ. ಹಲ್ವಾ ನಾಜೂಕಿನ ಸಿಹಿ. ತುಪ್ಪ ಕ್ಯಾರೆಟ್ಟು ಒಂದಕ್ಕೊಂದು ಹೊಂದಿಕೊಂಡು ಘಮಿಸಲು ಶುರುವಾದೊಡನೆ ಮೆಲ್ಲನೆ ಹಾಲನ್ನು ಬೆರೆಸುತ್ತಾ ಹೋಗಿ. ಕ್ಯಾರೆಟ್ಟಿನ ಒಂದೊಂದು ತುರಿಯನ್ನೂ ಹಾಲು ಸೇರಬೇಕು(ಹಾಲು ಜೇನು ಒಂದಾದಹಾಗೆ). ಹಾಗೆ ಮರದ ಸೌಟಿನಿಂದ ಮೃದುವಾಗಿ ಬೆರೆಸಿ. ಈಗ ಉರಿಯನ್ನು ಸ್ವಲ್ಪ ಸಣ್ಣ ಮಾಡಿಕೊಳ್ಳಿ. ಕ್ಯಾರೆಟ್‌ ತುರಿ ಮೆತುವಾಗುವವವರೆಗೆ ಬೆರೆಸುವಿಕೆ ಮುಂದುವರೆಸಿ. ಬಾಣಲೆಯಲ್ಲಿನ ಹಾಲು- ತುಪ್ಪ ಬೆರೆತ ಕ್ಯಾರೆಟ್‌ ತುರಿಗೆ ಸಕ್ಕರೆ ಬೆರೆಸಿ. ಚಮಚವನ್ನು ಹಿಂದಿಗಿಂತ ಸ್ವಲ್ಪ ಜೋರಾಗಿ ಆಡಿಸಿ, ಬೆರೆಸಿ. ಸಕ್ಕರೆ ಕರಗೋವರೆಗೆ ಹದವಾಗಿ ಬೇಯಲು ಬಿಡಿ. ಹಾಲಿನಂಶ, ಸಕ್ಕರೆ ಪೂರ್ಣವಾಗಿ ತುರಿಯಲ್ಲಿ ಬೆರೆತು ಹಿಂದಿಗಿಂತ ತುರಿ ಕೊಂಚ ಗಡಸಾಗುತ್ತದೆ. ಯಾಲಕ್ಕಿಯನ್ನು ನುಣ್ಣಗೆ ಪುಡಿಮಾಡಿ ಬೆರೆಸಿ. ಗೋಡಂಬಿ- ಬಾದಾಮಿಯನ್ನು ಸಣ್ಣ ಸಣ್ಣ ತುಂಡಾಗಿಸಿ. ದ್ರಾಕ್ಷಿಯನ್ನೂ ಗೋಡಂಬಿ- ಬಾದಾಮಿ ತುಂಡುಗಳನ್ನೂ ಪುಟ್ಟ ಬಾಣಲೆಯಲ್ಲಿ ಅರ್ಧ ಚಮಚ ತುಪ್ಪದಲ್ಲಿ ಆಡಿಸಿ ಬಾಡಿಸಿ, ಬಾಣಲೆಯಲ್ಲಿನ ಪದಾರ್ಥಕ್ಕೆ ಸೇರಿಸಿ. ಪದಾರ್ಥ ನಿಮ್ಮ ಗಲ್ಲದ ಬಣ್ಣಕ್ಕೆ, ಬಂತೆಂದರೆ ಕ್ಯಾರೆಟ್‌ ಹಲ್ವಾ ರೆಡಿಯಾಯಿತು ಎಂದರ್ಥ. ಬಿಸಿಯಾಗಿಯಾಗಲೀ, ಆರಿದ ಮೇಲಾಗಲೀ ರುಚಿ ಅದ್ಭುತ. ಇಷ್ಟು ಪ್ರಮಾಣದ ಹಲ್ವಾದಿಂದ ಆರೆಂಟು ಜನರ ಬಾಯಿರುಚಿ ತಣಿಸಬಹುದು. ಹಲ್ವಾ ಮಾಡುವ ಮೊದಲ ಪ್ರಯತ್ನ ನಿಮ್ಮದಾದರೆ ಆಲ್‌ ದಿ ಬೆಸ್ಟ್‌