Latest Posts

ಟಿ20 ವಿಶ್ವಕಪ್ ಗಿಂತಲೂ ಐಪಿಎಲ್ ಮುಖ್ಯ! ಕಾರಣವೇನು ಗೊತ್ತಾ?

ಕೋವಿಡ್-19 ಸೋಂಕು ಒಂದು ಅಲ್ಲದಿದ್ದರೆ ಇಷ್ಟು ಹೊತ್ತಿಗೆ 13ನೇ ಆವೃತ್ತಿಯ ಐಪಿಎಲ್ ಮುಗಿದು, ಭಾರತ ಟಿ 20 ವಿಶ್ವಕಪ್ ಗೆ ತಯಾರಿ ನಡೆಸುತ್ತಿರುತ್ತಿತ್ತು. ಐಪಿಎಲ್ ನಲ್ಲಿ ಹೊಸದಾಗಿ ಹುಟ್ಟಿಕೊಂಡ ದೇಶೀಯ ಪ್ರತಿಭೆಗಳು ರಾಷ್ಟ್ರೀಯ ತಂಡದ ಕದ ತಟ್ಟುತ್ತಿದ್ದರು. ಆದರೆ ಕೋವಿಡ್-19 ಎಂಬ ಕಣ್ಣಿಗೆ ಕಾಣದ ವೈರಸ್ ಎಲ್ಲಾ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿದೆ.
ಕೋವಿಡ್-19 ಸೋಂಕು ವಿಶ್ವವನ್ನೇ ಆವರಿಸಿದ ನಂತರ ಎಲ್ಲಾ ಕ್ರೀಡಾಕೂಟಗಳು ಮುಂದೂಡಿಕೆಯಾಗಿದೆ. ಕೆಲವು ರದ್ದಾಗಿದೆ. ತನ್ನ ಓಟವನ್ನು ಸಂಪೂರ್ಣ ನಿಲ್ಲಿಸಿದ್ದ ಕ್ರಿಕೆಟ್ ಈಗ ನಿಧಾನವಾಗಿ ಚಲಿಸಲಾರಂಭಿಸುತ್ತಿದೆ. ಕಾರಣ ಇಂಗ್ಲೆಂಡ್ ನಲ್ಲಿ ಮುಚ್ಚಿದ ಬಾಗಿಲಲ್ಲಿ ಟೆಸ್ಟ್ ಕ್ರಿಕೆಟ್ ಆರಂಭವಾಗಿದೆ. ವಿಶ್ವ ಕ್ರಿಕೆಟ್ ನ್ನು ತನ್ನತ್ತ ಸೆಳೆಯುತ್ತಿದ್ದ ಐಪಿಎಲ್ ಕೂಡಾ ಅನಿರ್ಧಿಷ್ಟಾವಧಿಗೆ ಮುಂದೂಡಿಕೆಯಾಗಿದೆ.
ಶತಾಯಗತಾಯ ಈ ವರ್ಷದ ಐಪಿಎಲ್ ನಡೆಸಲೇ ಬೇಕು ಎಂದು ಬಿಸಿಸಿಐ ಪಟ್ಟು ಹಿಡಿದಿದೆ. ಅದಕ್ಕಾಗಿ ಸಾಕಷ್ಟು ತಯಾರಿಯನ್ನೂ ಮಾಡುತ್ತಿದೆ. ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷನಾದ ಬಳಿಕ ಇದು ಮೊದಲ ಐಪಿಎಲ್. ಹಾಗಾಗಿ ಅವರಿಗಿದು ಪ್ರತಿಷ್ಠೆಯ ಪ್ರಶ್ನೆ. 2020ರಲ್ಲಿ ಐಪಿಎಲ್ ನಡೆಸಿಯೇ ನಡೆಸುತ್ತೇನೆ ಎಂದು ದಾದಾ ಇತ್ತೀಚೆಗೆ ಹೇಳಿದ್ದಾರೆ. ಒಂದು ವೇಳೆ ಈ ಬಾರಿ ಐಪಿಎಲ್ ನಡೆಯದೇ ಇದ್ದರೆ ಬಿಸಿಸಿಐಗೆ 525 ಮಿಲಿಯನ್ ಡಾಲರ್ ನಷ್ಟವಾಗಲಿದೆ ಎಂದು ಅಂದಾಜಿಸಲಾಗಿದೆ. ಇಷ್ಟೊಂದು ನಷ್ಟ ಮಾಡಿಕೊಳ್ಳಲು ಬಿಸಿಸಿಐ ತಯಾರಿಲ್ಲ. ಹಾಗಾದರೆ ಕೋವಿಡ್ ಬಿಟ್ಟು ಐಪಿಎಲ್ ಗೆ ಅಡ್ಡಿಯಾಗಿರುವುದೇನು? ಅದುವೇ ಟಿ 20 ವಿಶ್ವಕಪ್.
ಟಿ20 ವಿಶ್ವಕಪ್ ಭವಿಷ್ಯವೇನು?
ಐಪಿಎಲ್ ನಡೆಸಲು ಮೊದಲ ಆತಂಕವೆಂದರೆ ದೇಶದಲ್ಲಿ ಏರಿಕೆ ಕಾಣುತ್ತಿರುವ ಕೋವಿಡ್ -19 ಸೋಂಕಿತರ ಸಂಖ್ಯೆ. ಮತ್ತೊಂದು ಟಿ 20 ವಿಶ್ವಕಪ್. ಆಸ್ಟ್ರೇಲಿಯಾದಲ್ಲಿ ಮುಂದಿನ ಅಕ್ಟೋಬರ್ ನಲ್ಲಿ ಟಿ 20 ವಿಶ್ವಕಪ್ ನಡೆಯಬೇಕಿದೆ. ಕಾಂಗರೂ ದೇಶವೂ ಬಹುತೇಕ ಸಿದ್ದತೆಗಳನ್ನು ಮಾಡಿಕೊಂಡಿದೆ. ಒಂದು ವೇಳೆ ವಿಶ್ವಕಪ್ ಕೂಟ ನಡೆದರೆ ಐಪಿಎಲ್ ನಡೆಸಲು ಸಮಯ ಸಿಗುವುದಿಲ್ಲ. ಈ ಕಾರಣದಿಂದ ಬಿಸಿಸಿಐ ವಿಶ್ವಕಪ್ ರದ್ದು ಮಾಡುವಂತೆ ಐಸಿಸಿ ಮೇಲೆ ಒತ್ತಡ ಹಾಕುತ್ತಿದೆ.
ಸಾಧ್ಯತೆಗಳೇನು
ಐಸಿಸಿ ನಡೆಸುವ ವಿಶ್ವಕಪ್ ಕೂಟವನ್ನು ರದ್ದು ಮಾಡಿ ಒಂದು ದೇಶದ ಕೂಟ ನಡೆಸಲು ಅವಕಾಶ ನೀಡುವುದು ಸುಲಭದ ಮಾತಲ್ಲ. ಇದಕ್ಕೆ ಇತರ ದೇಶಗಳು ಒಪ್ಪಿಗೆ ನೀಡಬೇಕು. ಒಂದು ವೇಳೆ ವಿರೋಧ ಅಥವಾ ಟೀಕೆಗಳು ಎದುರಾದರೆ ಅದನ್ನೂ ಎದುರಿಸಬೇಕಾಗುತ್ತದೆ. ಆದರೆ ವಿಶ್ವಕಪ್ ಕೂಟ ರದ್ದಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಕಾರಣ ಐಸಿಸಿ ಮೇಲಿರುವ ಬಿಗಿ ಹಿಡಿತ.
ಮುಂದಿನ ವರ್ಷವೂ ಟಿ20 ವಿಶ್ವಕಪ್ ನಡೆಯಲಿದೆ. ಭಾರತ ಅದರ ಆತಿಥ್ಯ ವಹಿಸಲಿದೆ. ಈ ವರ್ಷದ ವಿಶ್ವಕಪ್ ರದ್ದಾದರೆ ಮುಂದಿನ ವರ್ಷದ ಕೂಟ ಆಯೋಜಿಸುವ ಅವಕಾಶವನ್ನು ಬಿಸಿಸಿಐ ಆಸ್ಟ್ರೇಲಿಯಾಗೆ ನೀಡಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಇದು ಈ ವರ್ಷ ಆಸೀಸ್ ಕ್ರಿಕೆಟ್ ಬೋರ್ಡ್ ಅನುಭವಿಸುವ ನಷ್ಟವನ್ನು ಸರಿದೂಗಿಸುವ ಪ್ರಯತ್ನವಾಗಿರಲಿದೆ.
ಬಹಳಷ್ಟು ವಿದೇಶಿ ಆಟಗಾರರು ಐಪಿಎಲ್ ಆಡಲು ಉತ್ಸುಕರಾಗಿದ್ದಾರೆ. ಕೋವಿಡೋತ್ತರದ ಕ್ರಿಕೆಟ್ ಉಳಿವಿಗೆ ಐಪಿಎಲ್ ನಡೆಯುವುದು ಮುಖ್ಯ ಎನ್ನುತ್ತಿದ್ದಾರೆ. ಆಸೀಸ್ ಕೋಚ್ ಜಸ್ಟಿನ್ ಲ್ಯಾಂಗರ್ ಕೂಡಾ ಐಪಿಎಲ್ ಪರವಾಗಿ ಬ್ಯಾಟ್ ಬೀಸಿದ್ದಾರೆ.
ಐಸಿಸಿಗೆ ಐಪಿಎಲ್ ಯಾಕೆ ಮುಖ್ಯ?
ಐಸಿಸಿಯ ಆದಾಯದ ಬಹುಮುಖ್ಯ ಮೂಲ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಬಿಸಿಸಿಐ. ಒಂದು ಮಾಹಿತಿಯ ಪ್ರಕಾರ ಐಸಿಸಿಯ ಶೇ.80ರಷ್ಟು ಆದಾಯ ಬಿಸಿಸಿಐ ನಿಂದ ಬರುತ್ತದೆ. ಅಂದರೆ ಐಸಿಸಿ ಬಹುತೇಕ ಬಿಸಿಸಿಐಯನ್ನೇ ಅವಲಂಬಿಸಿದೆ. ಬಿಸಿಸಿಐಗೆ ಪ್ರಮುಖ ಆದಾಯದ ಮೂಲ ಐಪಿಎಲ್. ಒಂದು ವೇಳೆ ಐಪಿಎಲ್ ನಡೆಯದಿದ್ದರೆ ಬಿಸಿಸಿಐಗೆ ನಷ್ಟವಾಗುತ್ತದೆ. ಇದರಿಂದ ನೇರ ಹೊಡೆತ ಐಸಿಸಿಗೆ ಬೀಳುತ್ತದೆ.
ಒಂದು ವೇಳೆ ಪ್ರೇಕ್ಷಕರಿಗೆ ಕ್ರೀಡಾಂಗಣಕ್ಕೆ ಅವಕಾಶ ನೀಡದೆ, ಮುಚ್ಚಿದ ಬಾಗಿಲಿನಲ್ಲಿ ಐಪಿಎಲ್ ನಡೆಸಿದರೂ ಟಿ20 ವಿಶ್ವಕಪ್ ಗಿಂತ ಹೆಚ್ಚಿನ ಆದಾಯವನ್ನು ಭಾರತೀಯ ಕೂಟ ತಂದುಕೊಡಬಹುದು ಎನ್ನುತ್ತವೆ ಲೆಕ್ಕಾಚಾರಗಳು. ಪ್ರಾಯೋಜಕರು, ಟಿವಿ ವೀಕ್ಷಕರ ಸಂಖ್ಯೆ ಎಲ್ಲವೂ ಐಪಿಎಲ್ ಗೆ ಜಾಸ್ತಿ ಇದೆ. ಟಿ20 ವಿಶ್ವಕಪ್ ಗಿಂತ ಐಪಿಎಲ್ ನಲ್ಲಿ ಹೆ್ಚ್ಚಿನ ಪಂದ್ಯಗಳು ನಡೆಯುತ್ತದೆ. ಇದು ಕೂಡಾ ಆದಾಯ ಹೆಚ್ಚಿಸುತ್ತದೆ.
ಟಿ20 ವಿಶ್ವಕಪ್ ನಲ್ಲಿ ಬೆರಳೆಣಿಕೆಯ ಪಂದ್ಯಗಳು ಮಾತ್ರ ಜಿದ್ದಾಜಿದ್ದಿನಿಂದ ಕೂಡಿರುತ್ತದೆ. ಉಳಿದ ನೀರಸ ಪಂದ್ಯಗಳಲ್ಲಿ ಪ್ರೇಕ್ಷಕರನ್ನು ಟಿವಿ ಪರದೆಯತ್ತ ಸೆಳೆಯುವುದು ಕಷ್ಟ. ಈ ಪಂದ್ಯಗಳಿಗೆ ಪ್ರಾಯೋಜಕರೂ ಸಿಗುವುದೂ ಕಷ್ಟ. ಆದರೆ ಐಪಿಎಲ್ ನಲ್ಲಿ ಪ್ರತಿಯೊಂದು ಪಂದ್ಯವೂ ಜಿದ್ದಾಜಿದ್ದಿನಿಂದ ಕೂಡಿರುತ್ತದೆ. ಇದು ಕ್ರಿಕೆಟ್ ನ ಜನಪ್ರಿಯತೆ ಹೆಚ್ಚಿಸಲೂ ಸಹಕಾರಿ ಎನ್ನುವುದು ಸದ್ಯದ ವಾದ.
ಸದ್ಯದ ಪರಿಸ್ಥಿತಿಯಲ್ಲಿ ಭಾರತದಲ್ಲಿ ಐಪಿಎಲ್ ನಡೆಸುವುದು ಕೂಡಾ ಕಷ್ಟ. ಶ್ರೀಲಂಕಾ, ಯುಎಇ ದೇಶಗಳು ಈ ಕೂಟವನ್ನು ಆಯೋಜಿಸಲು ಮುಂದೆ ಬಂದಿದೆ. ಭಾರತದಲ್ಲೇ ಐಪಿಎಲ್ ನಡೆಸುವುದು ನಮ್ಮ ಉದ್ದೇಶ ಎಂದು ಬಿಸಿಸಿಐ ಹೇಳಿದೆ. ಏನೇ ಆದರೂ ಟಿ20 ವಿಶ್ವಕಪ್ ಕೂಟ ನಡೆಸುವ ನಿರ್ಧಾರದ ಮೇಲೆ ಐಪಿಎಲ್ ಭವಿಷ್ಯ ನಿಂತಿದೆ.