Latest Posts

ಭಾರತ ತಂಡಕ್ಕೆ ಇಬ್ಬರು ಬೆಸ್ಟ್‌ ಕೀಪರ್‌ಗಳನ್ನು ಆರಿಸಿದ ಗಂಗೂಲಿ! ಅದು ಯಾರು ಗೊತ್ತೇ?

ಹೊಸದಿಲ್ಲಿ: ಅಂತಾರಾಷ್ಟೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಮಹೇಂದ್ರ ಸಿಂಗ್‌ ಧೋನಿ ತದನಂತರ ಟೀಮ್‌ ಇಂಡಿಯಾಗೆ ಮುಂದಿನ ವಿಕೆಟ್‌ ಕೀಪರ್‌ ಯಾರು ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ. ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಇಬ್ಬರು ಅತ್ಯುತ್ತಮ ವಿಕೆಟ್ ಕೀಪರ್, ಬ್ಯಾಟ್ಸ್‌ಮನ್‌ಗಳನ್ನು ಹೆಸರಿಸಿದ್ದಾರೆ.

ಎಂಎಸ್‌ ಧೋನಿ ಸ್ಥಾನ ತುಂಬಲು ರಿಷಭ್‌ ಪಂತ್‌ಗೆ ಮೊದಲ ಆಧ್ಯತೆ ನೀಡಲಾಗಿತ್ತು. ಆದರೆ, ಅವರು ಬ್ಯಾಟಿಂಗ್‌ನಲ್ಲಿ ಸ್ಥಿರ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು. ಈ ಹಿನ್ನೆಲೆಯಲ್ಲಿ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಕೆ.ಎಲ್‌ ರಾಹುಲ್‌ ಅವರಿಗೆ ಮೊರೆ ಹೋಗಲಾಯಿತು ಹಾಗೂ ಟೆಸ್ಟ್‌ ಕ್ರಿಕೆಟ್‌ನಲ್ಲಿ ವೃದ್ದಿಮಾನ್‌ ಸಹಾ ಅವರಿಗೆ ಅವಕಾಶ ನೀಡಲಾಯಿತು.

ಇತ್ತೀಚೆಗೆ ಮುಕ್ತಾಯವಾಗಿದ್ದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಸ್ಪೋಟಕ ಬ್ಯಾಟಿಂಗ್‌ ಮಾಡಿದ್ದ ಸಂಜು ಸ್ಯಾಮ್ಸನ್‌ ಕೂಡ ಏಕದಿನ ಹಾಗೂ ಟಿ20 ಭಾರತ ತಂಡದ ವಿಕೆಟ್‌ ಕೀಪಿಂಗ್‌ ಸ್ಥಾನಕ್ಕೆ ಬಲಿಷ್ಠ ಸ್ಪರ್ಧಿಯಾಗಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಮುಂಬರುವ ಓಡಿಐ, ಟಿ20 ಹಾಗೂ ಟೆಸ್ಟ್‌ ಸರಣಿಗಳನ್ನು ಗಮನದಲ್ಲಿಟ್ಟುಕೊಂಡು ಭಾರತ ತಂಡದ ಮಾಜಿ ನಾಯಕ ಹಾಗೂ ಪ್ರಸ್ತುತ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಇಬ್ಬರು ಉತ್ತಮ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ಗಳನ್ನು ಆರಿಸಿದ್ದಾರೆ.

ಹದಿಮೂರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಸ್ವಾಭವಿಕ ಆಟವಾಡದೆ 115ಕ್ಕೂ ಕಡಿಮೆ ಸ್ಟ್ರೈಕ್‌ ರೇಟ್‌ ಹೊಂದಿದ್ದ ರಿಷಭ್‌ ಪಂತ್‌ ಅವರನ್ನು ಗಂಗೂಲಿ ಬೆಂಬಲಿಸಿದ್ದಾರೆ. “ರಿಷಭ್‌ ಪಂತ್‌ ಹಾಗೂ ವೃದ್ದಿಮನ್‌ ಸಹಾ ಪ್ರಸ್ತುತ ಭಾರತ ತಂಡದಲ್ಲಿರುವ ಅತ್ಯುತ್ತಮ ವಿಕೆಟ್‌ ಕೀಪರ್‌ಗಳಾಗಿದ್ದಾರೆ,” ಎಂದು ತಿಳಿಸಿದ್ದಾರೆ.

ರಿಷಭ್‌ ಪಂತ್ ಕಳೆದ ಐಪಿಎಲ್‌ ಟೂರ್ನಿಯಲ್ಲಿ 120ಕ್ಕೂ ಕಡಿಮೆ ಸ್ಟ್ರೈಕ್‌ರೇಟ್‌ ಹೊಂದಿದ್ದರ ಹೊರತಾಗಿಯೂ ಅವರನ್ನು ಬೆಂಬಲಿಸಲು ಕಾರಣ ಕೇಳಿದ್ದಕ್ಕೆ, ‘ಅವರು ಅಪ್ರತಿಮ ಪ್ರತಿಭೆ ಹಾಗೂ ಅವರ ಬ್ಯಾಟ್‌ ಸ್ವಿಂಗ್‌ ಖಂಡಿತ ಅವರನ್ನು ಕಮ್‌ಬ್ಯಾಕ್‌ ಮಾಡಲಿದೆ ಎಂದು ಉತ್ತರಿಸಿದರು.

“ತಲೆ ಕೆಡಸಿಕೊಳ್ಳಬೇಡಿ. ಅವರ ಬ್ಯಾಟ್‌ ಸ್ವಿಂಗ್‌ನಿಂದಾಗಿ ಖಂಡಿತಾ ಕಮ್‌ಬ್ಯಾಕ್‌ ಮಾಡಲಿದ್ದಾರೆ. ಅವರಿನ್ನೂ ಯುವ ಆಟಗಾರ ಹಾಗೂ ನಾವೆಲ್ಲರೂ ಅವರಿಗೆ ಮಾರ್ಗದರ್ಶನ ನೀಡುವ ಅಗತ್ಯವಿದೆ. ಅವರೊಬ್ಬ ಅಪ್ರತಿಮ ಪ್ರತಿಭೆ. ರಿಷಭ್‌ ಪಂತ್‌ ಮುಂದೆ ಸರಿಯಾಗುತ್ತಾರೆ,” ಎಂದು ತಿಳಿಸಿದರು.

ಸೀಮಿತ ಓವರ್‌ಗಳ ಸರಣಿಯಿಂದ ರಿಷಭ್‌ ಪಂತ್‌ ಅವರನ್ನು ಕೈ ಬಿಡಲಾಗಿದೆ. ನಂತರ ಟೆಸ್ಟ್ ತಂಡಕ್ಕೆ ಮರಳಿದರೆ, ಉತ್ತಮ ವಿಕೆಟ್‌ ಕೀಪರ್ ಹಾಗೂ ಅತ್ಯುತ್ತಮ ಲಯದಲ್ಲಿರುವ ವೃದ್ದಿಮನ್‌ ಸಹಾ ಅವರಿಗೆ ಅವಕಾಶ ನೀಡಲಾಗುವುದೇ? ಎಂದು ಕೇಳಿದ ಪ್ರಶ್ನೆಗೆ ಗಂಗೂಲಿ ಸ್ಪಷ್ಟ ಉತ್ತರ ನೀಡಲಿಲ್ಲ. “ಇದರಲ್ಲಿ ಒಬ್ಬರು ಮಾತ್ರ ಆಡಲಿದ್ದಾರೆ. ಆಗ ಯಾರು ಉತ್ತಮ ಲಯದಲ್ಲಿರುತ್ತಾರೊ ಅವರು ಆಡಲಿದ್ದಾರೆ,” ಎಂದು ಗಂಗೂಲಿ ಹೇಳಿದರು.

ರಿಷಭ್‌ ಪಂತ್‌ ಅವರನ್ನು ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಮೂರು ಪಂದ್ಯಗಳ ಟಿ20 ಸರಣಿಯಿಂದ ಕೈ ಬಿಡಲಾಗಿದೆ. ಕೆ.ಎಲ್‌ ರಾಹುಲ್‌ ಹಾಗೂ ಸಂಜು ಸ್ಯಾಮ್ಸನ್‌ ಅವರು ವಿಕೆಟ್‌ ಕೀಪರ್-ಬ್ಯಾಟ್ಸ್‌ಮನ್‌ ಸ್ಥಾನದಲ್ಲಿದ್ದಾರೆ. ನ.27 ರಂದು ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಮೊದಲನೇ ಏಕದಿನ ಪಂದ್ಯ ಜರುಗಲಿದೆ.

ಡಿ.17 ರಿಂದ ಆರಂಭವಾಗುವ ಬಾರ್ಡರ್‌ ಗವಾಸ್ಕರ್‌ ಟೆಸ್ಟ್ ಸರಣಿಯ ಭಾರತ ತಂಡದಲ್ಲಿ ವಿಕೆಟ್‌ ಕೀಪರ್‌ಗಳ ಸ್ಥಾನದಲ್ಲಿ ವೃದ್ದಿಮನ್‌ ಸಹಾ ಹಾಗೂ ರಿಷಭ್‌ ಪಂತ್‌ ಇದ್ದಾರೆ.