ಮಂಗಳೂರು: ದೇವಾಲಯಗಳು ಕಡ್ಡಾಯವಾಗಿ ಸಿಸಿಟಿವಿ ಕೆಮರಾಗಳನ್ನು ಒಳಗೊಂಡಿರಬೇಕು ಮತ್ತು ಅವುಗಳು ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ನಿತ್ಯ ಪರಿಶೀಲಿಸಬೇಕು ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.
ಸೋಮವಾರ ತಮ್ಮ ಕಚೇರಿಯಲ್ಲಿ ನಡೆದ ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯ ದೇವಾಲಯಗಳ ಆಭರಣಗಳ ಸಂರಕ್ಷಣೆ ಹಾಗೂ ಮೌಲ್ಯಮಾಪನ ಮಾಡುವ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತಾದ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ ಮಾತನಾಡಿ, ಮುಖ್ಯವಾಗಿ ಎ ಮತ್ತು ಬಿ ವರ್ಗಕ್ಕೆ ಸೇರಿದ ದೇವಾಲಯಗಳಲ್ಲಿ ಪೊಲೀಸ್ ಇಲಾಖೆಯಿಂದ ತರಬೇತಿ ಪಡೆದ ನುರಿತ ಭದ್ರತಾ ಸಿಬಂದಿಯನ್ನು ನೇಮಕ ಮಾಡಿಕೊಳ್ಳಬೇಕು. ಭದ್ರತೆಯ ದೃಷ್ಟಿಯಿಂದ ಎಲ್ಲ ದೇವಾಲಯಗಳ ಆಡಳಿತ ವರ್ಗ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ದೇವಸ್ಥಾನಗಳಲ್ಲಿ ಒಂದೇ ಬಾಗಿಲಲ್ಲಿ ಪ್ರವೇಶಕ್ಕೆ ಅನುಮತಿ ನೀಡಬೇಕು.
ಅಲಾರ್ಮ್ (ಗಂಟೆ) ಅಳವಡಿಸಿ ಅವುಗಳು ಕಾರ್ಯನಿರ್ವಹಿಸುತ್ತಿವೆಯೇ ಎಂದು ಪರಿಶೀಲಿಸಬೇಕು. ಈ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ದೇವಾಲಯಗಳಲ್ಲಿ ಸಿಸಿಟಿವಿ ಕಡ್ಡಾಯ: ಡಿಸಿ
