ಬಡಗನ್ನೂರು: ಕೋರೋನಾದಿಂದಾಗಿ ಆರ್ಥಿಕವಾಗಿ ತೀರಾ ಹದಗೆಟ್ಟಿರುವ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಹೆಚ್ಚಿನವರು ಉದ್ಯೋಗ, ವ್ಯವಹಾರ ವನ್ನು ಕಳೆದುಕೊಂಡು ಮನೆಯಲ್ಲೇ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಂದರ್ಭದಲ್ಲಿ ಕೊಯಿಲ ಪಾಲಡ್ಕದ ಯುವಕರು ಆ ಒಂದು ಸಮಯವನ್ನು ಸಮಾಜಮುಖಿ ಕಾರ್ಯಗಳಿಗೆ ಬಳಸುವ ಮೂಲಕ ಇಡೀ ಗ್ರಾಮಕ್ಕೆ ಮಾದರಿಯಾಗಿದ್ದಾರೆ.

ಈಶ್ವರಮಂಗಲ – ಪಟ್ಟೆ ರಸ್ತೆಯಲ್ಲಿ ಪಾಲಡ್ಕದಿಂದ ಕೊಯಿಲವನ್ನು ಸಂಪರ್ಕಿಸುವ ಕಾಲುದಾರಿಯೊಂದಿದ್ದು ಅದು ನಡೆದಾಡಲು ಅಸಾಧ್ಯವಾಗಿ ಕೇವಲ ಹೆಸರಿಗೆ ಮಾತ್ರ ಕಾಲುದಾರಿ ಎಂಬಂತಹ ಪರಿಸ್ಥಿತಿಯಲ್ಲಿತ್ತು. ಇದರ ಒಂದು ಬದಿಯಲ್ಲಿ ಅಡಿಕೆ ತೋಟವಾದರೆ ಇನ್ನೊಂದು ಬದಿಯಲ್ಲಿ ಕಿರು ಹೊಳೆಯು ಹರಿಯುತ್ತಿದೆ. ಹಲವಾರು ವರ್ಷಗಳಿಂದ ಗ್ರಾಮಸ್ಥರು, ಶಾಲಾ ವಿದ್ಯಾರ್ಥಿಗಳು ತಮ್ಮ ಭೌತಿಕ ಮತ್ತು ಧಾರ್ಮಿಕ ವಿದ್ಯಾಭ್ಯಾಸಕ್ಕಾಗಿ ಹೆಚ್ಚಾಗಿ ಇದೇ ಕಿರು ದಾರಿಯನ್ನು ಬಳಸುತ್ತಿರುವುದರಿಂದ, ಈ ದಾರಿಯನ್ನು ಅಭಿವೃದ್ಧಿಪಡಿಸಲು ಹಲವಾರು ಬಾರಿ ಪಂಚಾಯತ್ ಮತ್ತು ತಾಲೂಕು ಮಟ್ಟದಲ್ಲಿ ಅಧಿಕಾರಿಗಳ ಗಮನಕ್ಕೆ ತಂದು ಮನವಿಯನ್ನೂ ಸಲ್ಲಿಸಿದ್ದರು,
ಆದರೂ ಯಥಾ ಸ್ಥಿತಿಯಲ್ಲೇ ಇರುವ ದಾರಿಯಲ್ಲಿನ ಅಡೆ ತಡೆಗಳನ್ನು ಯುವಕರು ತಾವೇ ಸ್ವತಃ ಮುಂಚೂಣಿಯಲ್ಲಿ ನಿಂತು ನಡೆಸುವ ಮೂಲಕ ತಾತ್ಕಾಲಿಕವಾಗಿ ಗ್ರಾಮಸ್ಥರು ನಿರಾಳರಾಗುವಂತೆ ಮಾಡಿದ್ದಾರೆ.

ಸಣ್ಣ ಮಕ್ಕಳಿಂದ ಹಿಡಿದು ಊರಿನ ಯುವಕರು, ವಿದ್ಯಾರ್ಥಿಗಳು ಈ ಒಂದು ಸಾಮಾಜಿಕ ಕಾರ್ಯದಲ್ಲಿ ಕೈಜೋಡಿಸಿದರು.