Latest Posts

ಚೆಂಬರಿಕ್ಕ ಖಾಝಿ ಕೊಲೆ ಪ್ರಕರಣ:ಸಿ.ಬಿ.ಐ ಸಲ್ಲಿಸಿದ ಆತ್ಮಹತ್ಯೆ ಎಂಬ ವರದಿಯನ್ನು ತಿರಸ್ಕರಿಸಿದ ಜಿಪ್ಮರ್ ರಿಪೋರ್ಟ್

ಕಾಸರಗೋಡು: ಮುಸ್ಲಿಂ ಧಾರ್ಮಿಕ ಪಂಡಿತ ಹಾಗೂ ಸಮಸ್ತ ನೇತಾರರಾಗಿದ್ದ ಖಾಝಿ ಸಿ.ಎಂ ಅಬ್ದುಲ್ಲ ಮೌಲವಿಯವರ ಮರಣ ಆತ್ಮಹತ್ಯೆ ಅಲ್ಲ ಎಂಬ ವರದಿಯನ್ನು ಪಾಂಡಿಚ್ಚೇರಿ ಜಿಪ್ಮರ್ ಮೆಡಿಕಲ್ ಕಾಲೇಜಿನ ಫಾರೆನ್ಸಿಕ್ ವಿಭಾಗವು ಎರಣಾಂಕುಳಂ ಸಿ.ಜೆ.ಎಂ ನ್ಯಾಯಾಲಯಕ್ಕೆ ಸಲ್ಲಿಸಿದೆ. ವರದಿಯ ಪ್ರತಿಯು ಬಿ.ಎನ್.ಸಿ ಗೆ ಲಭಿಸಿದೆ.
ಖಾಝಿ ಪ್ರಕರಣದಲ್ಲಿ ಖಾಝಿಯ ಕುಟುಂಬದ ಪರವಾಗಿ ವಾದವನ್ನು ಮಂಡಿಸುತ್ತಿರುವ ಅಡ್ವಕೇಟ್ ಶೈಜನ್ ಸಿ.ಜಾರ್ಜ್ ಇವರು ಸಲ್ಲಿಸಿದ ಮಾಹಿತಿ ಹಕ್ಕು ಕಾಯ್ದದೆಯ ಪ್ರಕಾರ ಗೌಪ್ಯವಾಗಿಟ್ಟಿದ್ದ ಮಾಹಿತಿಯನ್ನು ಸಿ.ಬಿ.ಐ ತಂಡ ಕೇಸಿನ ವಿಚಾರಣೆಯನ್ನು ಮುಂದುವರಿಸುತ್ತಿರುವ ನ್ಯಾಯಾಲಯಕ್ಕೆ ಸಲ್ಲಿಸಿದೆ. ಸೈಕಾಲಜಿಕಲ್ ಆಟಾಪ್ಸಿ ಎಂಬ ಹೊಸ ವಿಶ್ಲೇಷಣೆಯ ಮೂಲಕ ‘ಖಾಝಿಯವರು ಆತ್ಮಹತ್ಯೆ ಮಾಡಿದರು’ ಎಂಬ ಸಿ.ಬಿ.ಐ ವಾದವನ್ನು ಜಿಪ್ಮರ್ ತಂಡ ತಳ್ಳಿಹಾಕಿದೆ. ಕೇರಳದಲ್ಲಿ ಸೈಕಾಲಜಿಕಲ್ ಆಟಾಪ್ಸಿಯನ್ನು ಬಳಸಿ ಕೊಲೆ ಪ್ರಕರಣದ ತನಿಖೆಯನ್ನು ನಡೆಸಲಾಗಿದ್ದು ಇದೇ ಮೊದಲ ಬಾರಿ ಎಂದು ಹೇಳಲಾಗಿದೆ. ತನಿಖೆಗಾಗಿ ಜಿಪ್ಮರ್ ತಂಡವು ಚೆಂಬರಿಕ ಹಾಗೂ ಖಾಝಿಯ ಮನೆಗೆ ಭೇಟಿ ನೀಡಿ ಮಾಹಿತಿಯನ್ನು ಕಲೆಹಾಕಿದ್ದರು. ಜಿಪ್ಮರ್ ತನಿಖಾ ತಂಡವು ಸಿದ್ಧಪಡಿಸಿದ ತನಿಖಾ ವರದಿಯ ಬಿಡುಗಡೆಯು ಮಂದಗತಿಯಲ್ಲಿ ಸಾಗುತ್ತಿದ್ದ ಖಾಝಿ ಪ್ರಕರಣಕ್ಕೆ ಹೊಸ ಹುರುಪನ್ನು ನೀಡಲಿದೆ.

2010 ಫೆ 15 ರಂದು ಪೂರ್ವಾಹ್ನ 6:50 ರ ವೇಳೆಗೆ ಸಿ.ಎಂ ಅಬ್ದುಲ್ಲ ಮುಸ್ಲಿಯಾರರ ಮೃತದೇಹವು ಅವರ ಮನೆಯಿಂದ 900 ಮೀಟರ್ ದೂರದ ಚೆಂಬರಿಕ ಸಮುದ್ರ ತೀರದಲ್ಲಿ ಕಡಲಿನಿಂದ 40 ಮೀಟರ್ ದೂರದಲ್ಲಾಗಿ ದೊರೆತಿತ್ತು. ಚೆಂಬರಿಕ ಖಾಝಿಯ ಮರಣವು ಆತ್ಮಹತ್ಯೆ ಎಂದು ಹೇಳಿ ಖಾಝಿ ಪ್ರಕರಣದ ತನಿಖೆಯನ್ನು ಬೇಕಲ ಪೊಲೀಸರು ಕೊನೆಗೊಳಿಸಿದರು. ಸಾಂದರ್ಭಿಕ ಪುರಾವೆಗಳನ್ನು ಮುಂದಿಟ್ಟು ಪೋಲೀಸ್ ನಡೆಸಿದ ತನಿಖೆಯನ್ನು ಸಿ.ಬಿ.ಐ ತಂಡವೂ ಎತ್ತಿಹಿಡಿಯಿತು.
ಸಾತ್ವಿಕ ಪಂಡಿತ, ಹಲವು ಗ್ರಂಥಗಳ ರಚನಾಕಾರ ಸಮಸ್ತದ ಫತ್ವಾ ಸಮಿತಿಯ ಸದಸ್ಯ, ಹಲವು ಧಾರ್ಮಿಕ ಸಾಮಾಜಿಕ ಸಂಸ್ಥೆಗಳ ನೇತಾರನಾಗಿದ್ದುಕೊಂಡು ಅವರು ಆತ್ಮಹತ್ಯೆ ಮಾಡಿದರು ಎಂಬ ವಾದವನ್ನು ಜನಸಾಮಾನ್ಯರು ತಿರಸ್ಕಾರ ಭಾವದಿಂದ ಸ್ವೀಕರಿಸಿದರಲ್ಲದೆ, ಖಾಝಿ ಕುಟುಂಬದವರು ಮತ್ತು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಸಂಘಟನೆಯು ಪೋಲೀಸರ ವಾದವನ್ನು ತಿರಸ್ಕರಿಸಿ ನಿಷ್ಪಕ್ಷಪಾತ ತನಿಖೆಯನ್ನು ನಡೆಸುವಂತೆ ಪ್ರತಿಭಟನೆಯನ್ನು ನಡೆಸುತ್ತಾ ಬಂದಿದೆ. ಮೊದಲನೇ ಹಂತದ ತನಿಖೆಯನ್ನು ನಡೆಸಿದ ಬೇಕಲ ಪೋಲೀಸರು ಹಾಗೂ ಕ್ರೈಂ ಬ್ರಾಂಚ್ ವಿಭಾಗದ ತನಿಖಾಧಿಕಾರಿಗಳು ವರದಿಯನ್ನು ಸಲ್ಲಿಸುವ ಮೊದಲೇ ಸಿ.ಬಿ.ಐ ತನಿಖೆಯನ್ನು ಪ್ರಾರಂಭಿಸಿತ್ತು. ಖಾಝಿಯವರು ಚೆಂಬರಿಕ ತೀರದಲ್ಲಿ ಬಂಡೆಕಲ್ಲಿನ ಮೇಲೇರಿ ಜಿಗಿದು ಆತ್ಮಹತ್ಯೆ ಮಾಡಿದರು ಎಂಬ ಊಹೆಗೆ ಸಿ.ಬಿ.ಐ ತಂಡ ತನಿಖೆಯ ಹಾದಿಯನ್ನು ತಿರುಚಿತು. ಈ ವಾದವನ್ನು ಎರಣಾಂಕುಳಂ ಸಿ.ಜೆ.ಐ ನ್ಯಾಯಾಲಯವು ತೀವ್ರವಾಗಿ ಟೀಕೆಗೊಳಪಡಿಸಿತ್ತು. ಸಿ.ಬಿ.ಐ ಸಲ್ಲಿಸಿದ ಎರಡನೇ ತನಿಖಾ ವರದಿಯಲ್ಲೂ ಖಾಝಿಯವರ ಮರಣ ಆತ್ಮಹತ್ಯೆ ಎಂಬುವುದಕ್ಕೆ ಪುರಾವೆಗಳಿಲ್ಲದಿದ್ದರೂ ಸಾಂದರ್ಭಿಕ ಪುರಾವೆ ಮತ್ತು ತಜ್ಞರ ಅಭಿಪ್ರಾಯವನ್ನು ಪಡೆದು ಸಿ.ಬಿ.ಐ ತನಿಖೆಯನ್ನು ಪೂರ್ಣಗೊಳಿಸಿತು. ಈ ವರದಿಯನ್ನು ಸ್ವೀಕಾರ್ಹವಲ್ಲವೆಂದು ಘೋಷಿಸಿ ಕುಟುಂಬದ ಸದಸ್ಯರು ಪ್ರತಿಭಟನೆಯನ್ನು ಮುಂದುವರಿಸುತ್ತಿದ್ದಾರೆ. ಸುಮಾರು 400 ದಿನಗಳಿಂದ ಖಾಝಿ ಆಕ್ಷನ್ ಸಮಿತಿಯೂ ಪ್ರತಿಭಟನಾ ನಿರತವಾಗಿದೆ.

ನ್ಯಾಯಾಲಯದ ಆದೇಶದಂತೆ ಕೊಲೆ ಪ್ರಕರಣದ ತನಿಖೆಯನ್ನು ಸೈಕಾಲಜಿಕಲ್ ಪೋಸ್ಟ್ ಮಾರ್ಟಂ ಎಂಬ ಸೈಕಾಲಜಿಕಲ್ ಆಟೋಪ್ಸಿ ಪ್ರಯೋಗದ ಮೂಲಕ ಕೇರಳ ರಾಜ್ಯದಲ್ಲೇ ಮೊದಲ ಬಾರಿಗೆ ಖಾಝಿ ಪ್ರಕರಣದ ತನಿಖೆಗಾಗಿ ಪ್ರಯೋಗಿಸಲಾಗಿದೆ. ಪ್ರಸ್ತುತ ತನಿಖೆಯನ್ನು ಪಾಂಡಿಚ್ಚೇರಿಯ ಜಿಪ್ಮರ್ ಮೆಡಿಕಲ್ ಕಾಲೇಜಿನ ಪ್ರತಿನಿಧಿಗಳು ಪೂರ್ಣಗೊಳಿಸಿದ್ದಾರೆ. ಇದರ ಬೇನ್ನಲ್ಲೇ ಸಿ.ಬಿ.ಐ ಸಂಘದ ಕೇರಳ ರಾಜ್ಯದ ಉಸ್ತುವಾರಿಯಾಗಿರುವ ಐ.ಜಿ ಕೂಡ ಚೆಂಬರಿಕಾಗೆ ಭೇಟಿ ನೀಡಿ ತನಿಖೆಯ ಅಭಿವೃದ್ಧಿಯನ್ನು ಪರಿಸೀಲನೆಗೊಳಪಡಿಸಿದ್ದರು.